ರಾಜ್ಯ ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಿಸಿ ಕನ್ನಡಿಗರನ್ನು ಕೆರಳಿಸುವ ಕೆಲಸ ಮಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ

ಬೆಂಗಳೂರು: ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿಗರ ನಡುವೆ ಆಗಾಗ ಸಂಘರ್ಷ ನಡೆದರೂ, ರಾಜ್ಯಾದ್ಯಂತ ಎರಡೂ ಸಮುದಾಯಗಳ ಜನರು ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಮರಾಠ ಅಭಿವೃದ್ದಿ ಪ್ರಾಧಿಕಾರ ಘೋಷಿಸಿ ಅನಗತ್ಯವಾಗಿ ಕನ್ನಡಿಗರನ್ನು ಕೆರಳಿಸುವ ಮೂರ್ಖತನ ಕೆಲಸಕ್ಕೆ ಕೈಹಾಕಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಬುಧವಾರ ಸರಣಿ ಟ್ವೀಟ್‌ ಮಾಡಿರುವ ಅವರು, ಯಾವುದೇ ವೈಜ್ಞಾನಿಕ ಅಧ್ಯಯನಗಳಿಲ್ಲದೆ ಜಾತಿ ಆಧಾರಿತ ನಿಗಮ-ಪ್ರಾಧಿಕಾರ ಸ್ಥಾಪನೆ ಸಮಾಜ ವಿರೋಧಿ ಮಾತ್ರವಲ್ಲ, ಪ್ರಜಾಪ್ರಭುತ್ವ ವಿರೋಧಿ ತೀರ್ಮಾನ ಎಂದು ಹರಿಹಾಯ್ದರು.

ಚುನಾವಣೆಗಳನ್ನು ಸಾಧನೆಯ ಬಲದಿಂದ ಗೆಲ್ಲಲಾಗದ ರಾಜ್ಯದ ಮತಿಹೀನ ಬಿಜೆಪಿ ಸರ್ಕಾರವು ಇಂತಹ ಅಗ್ಗದ ತಂತ್ರ-ಕುತಂತ್ರಗಳನ್ನು ಮಾಡಿ ಸಮಾಜವನ್ನು ಒಡೆಯಲು ಹೊರಟಿದೆ ಎಂದು ಕಿಡಿಕಾರಿದರು.

ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆಗೆ ನಮ್ಮ ವಿರೋಧ ಇಲ್ಲ. ಜಾತಿ-ಧರ್ಮಗಳನ್ನು ಮೀರಿದ್ದು ಬಡತನ. ತಳಸಮುದಾಯಗಳಲ್ಲಿ ಮಾತ್ರವಲ್ಲ ಮೇಲ್ಜಾತಿಗಳಲ್ಲಿಯೂ ಬಡವರಿದ್ದಾರೆ. ಎಲ್ಲ ಜಾತಿ-ಧರ್ಮಗಳ ಬಡವರ ಕಲ್ಯಾಣ ಕಾರ್ಯಕ್ರಮಗಳಿಗೆ ನನ್ನ ಸ್ವಾಗತವಿದೆ. ಕೇವಲ ರಾಜಕೀಯ ಲಾಭಕ್ಕಾಗಿ ನಡೆಸುವ ಇಂತಹ ಕ್ಷುಲ್ಲಕ ಬುದ್ದಿಯ ಕಸರತ್ತುಗಳನ್ನು ಖಂಡಿಸುತ್ತೇನೆ ಎಂದು ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.