ಉಡುಪಿ: ಶ್ರೀರಾಮ ಸೇನೆ ಹಾಗೂ ನಾನು ರಾಜಕೀಯದಿಂದ ದೂರ ಸರಿದಾಗಿದೆ. ನಾವು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೊಲಸು ರಾಜಕಾರಣದಲ್ಲಿ ಪ್ರಾಮಾಣಿಕತೆ, ಹಿಂದುತ್ವಕ್ಕೆ ಜನ ಬೆಂಬಲ ಇಲ್ಲ. ಗೂಂಡಾಗಿರಿ ಮತ್ತು ದುಡ್ಡೇ ಪ್ರಮುಖ ಮಾನದಂಡವಾಗಿದೆ. ಚುನಾವಣೆಯಲ್ಲಿ ಯಾರಿಗೆ ಬೆಂಬಲ ನೀಡುವುದಾಗಿ ಮುಂದಿನ ದಿನಗಳಲ್ಲಿ ತೀರ್ಮಾನಿಸುತ್ತೇವೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.
ಉಡುಪಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತ ರಾಜ್ಯ ರಾಜಕೀಯ ಕುಲಗೆಟ್ಟುಹೋಗಿದೆ. ಮೂರು ರಾಜಕೀಯ ಪಕ್ಷ ಗಳನ್ನು ಧಿಕ್ಕರಿಸಿ ಹೊಸ ಪಕ್ಷ ಕಟ್ಟುವ ಅನಿವಾರ್ಯತೆ ಎದುರಾಗಿದೆ. ಮೋದಿ ನೂರಕ್ಕೆ ನೂರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಮಾತ್ರ ಇನ್ನೂ ಸುಧಾರಣೆ ಆಗಿಲ್ಲ ಎಂದರು.
ಬಿಜೆಪಿಯ ಪ್ರಾಮಾಣಿಕತೆ ಹಾಗೂ ಹಿಂದುತ್ವದ ಹೋರಾಟ ಎಲ್ಲಿಗೆ ಹೋಯಿತು. ಕೋಟಿ ಕೋಟಿ ಹಣದ ಡೀಲ್ ವಿಚಾರ ಮಾತನಾಡುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನವರು ನಮ್ಮ ತೆರಿಗೆ ಹಣವನ್ನು ರೆಸಾರ್ಟ್, ಡೀಲ್ ಗೆ ದುರುಪಯೋಗ ಮಾಡುತ್ತಿದ್ದಾರೆ. ಒಬ್ಬರು ಆಡಿಯೋ ಬಿಡುಗಡೆ ಮಾಡುತ್ತಾರೆ, ಮತ್ತೊಬ್ಬರು ನಾಳೆ ವಿಡಿಯೋ ಬಿಡುಗಡೆ ಮಾಡುತ್ತಾರಂತೆ. ಇವರಲ್ಲಿ ವಿಡಿಯೋ ಇದಿದ್ದರೆ ಮೊದಲೇ ಯಾಕೆ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದ ಮುತಾಲಿಕ್, ಬಿಜೆಪಿಯವರು ಇನ್ನೂ ಮಾನನಷ್ಟ ಮೊಕದ್ದಮೆ ಯಾಕೆ ಹಾಕಿಲ್ಲ. ಸತ್ಯ ನಿಮ್ಮ ಪರವಾಗಿದ್ದರೆ ನ್ಯಾಯಾಲಯಕ್ಕೆ ಹೋಗಿ ಎಂದು ಬಿಜೆಪಿಗೆ ಸವಾಲೆಸೆದರು.
ಪ್ರೇಮಿಗಳ ದಿನಾಚರಣೆಗೆ ವಿರೋಧ: ಮುತಾಲಿಕ್
ಶ್ರೀರಾಮ ಸೇನೆಯು ಪ್ರೇಮಿಗಳ ದಿನಾಚರಣೆಯಂದು ಪೊಲೀಸರೊಂದಿಗೆ ಕೈ ಜೋಡಿಸುತ್ತದೆ. ಪ್ರೇಮಿಗಳ ದಿನಾಚರಣೆ ಹೆಸರಿನಲ್ಲಿ ಪಾರ್ಕ್, ರಸ್ತೆಗಳಲ್ಲಿ ಯಾವುದೇ ರೀತಿ ಅಸಹ್ಯ, ಅಶ್ಲೀಲ, ಅಸಭ್ಯತೆ ಕಂಡು ಬಂದರೆ ಪೊಲೀಸರಿಗೆ ಮಾಹಿತಿ ನೀಡಲಾಗುವುದು. ಯಾವುದೇ ಕಾರಣಕ್ಕೂ ಕಾನೂನು ಕೈಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಪ್ರೇಮಿ ಗಳ ದಿನ ಆಚರಣೆಗೆ ನಮ್ಮ ವಿರೋಧ ಇದೆ. ಪಾಶ್ಚಿಮಾತ್ಯರ ‘ಡೇ’ ಸಂಸ್ಕೃತಿ ನಮಗೆ ಬೇಡ. ಇದಕ್ಕೆ ಅವಕಾಶ ನೀಡದಂತೆ ಒತ್ತಾಯಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬಳಿಕ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ಪ್ರಮೋದ್ ಮುತಾಲಿಕ್ ಕೃಷ್ಣ ಮಠಕ್ಕೆ ಭೇಟಿ ನೀಡಿ ಕೃಷ್ಣ ನ ದರ್ಶನ ಪಡೆದರು. ಬಳಿಕ ಪರ್ಯಾಯ ಪಲಿಮಾರು ಶ್ರೀಯನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಶ್ರೀ ರಾಮಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್, ಶ್ರೀ ಮಧುಕರ್ ಮುದ್ರಾಡಿ, ವಿಭಾಗ ಅಧ್ಯಕ್ಷ ಜೀವನ್ ನೀರುಮಾರ್ಗ, ಜಿಲ್ಲಾ ಅಧ್ಯಕ್ಷ ಜಯರಾಂ ಅಂಬೆಕಲ್ಲು, ದಿನೇಶ್ ಪಾಂಗಳ, ಯಶವಂತ್ ಮಣಿಪಾಲ ಮೊದಲಾದವರು ಇದ್ದರು.