ಕಾರ್ಕಳ: ಶ್ರೀ ವೆಂಕಟರಮಣ ಮಹಿಳಾ ಯಕ್ಷಗಾನ ಕಲಾ ಮಂಡಳಿ ಉದ್ಘಾಟನೆ ಫೆ. ೧ರಂದು ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ಇರುವ ಶ್ರೀನಿವಾಸ ಕಲಾ ಮಂದಿರದಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಮಾಳ ಸುಮತಿ ಶೆಣೈ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಮಾಳ ದೇವದಾಸ್ ಶೆಣೈ, ಉದ್ಯಮಿ ಜ್ಯೋತಿ ಪೈ ಭಾಗವಹಿಸಿದ್ದರು. ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಜಯರಾಮ್ ಪ್ರಭು ಮಾತಾನಾಡಿ, ೧೮ನೇ ಶತಮಾನದಿಂದಲೂ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಯಕ್ಷಗಾನದ ನಂಟು ಇದೆ. ಆ ಸಮಯದಲ್ಲಿ ವೆಂಕಟರಮಣ ದಶಾವತಾರ ಯಕ್ಷಗಾನ ಮಂಡಳಿ ಇದ್ದು, ಕ್ರಮೇಣ ತಾಳ ಮದ್ದಳೆಗೆ ಸೀಮಿತವಾಯಿತು. ಇದೀಗ ಸಮಾಜದ ಮಹಿಳೆಯರು ಯಕ್ಷಗಾನ ಕಲಾ ಮಂಡಳಿಯನ್ನು ಸ್ಥಾಪಿಸಿದ್ದು ತುಂಬಾ ಶ್ಲಾಘನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯಕ್ಷಗಾನ ಭಾಗವತ ಕೆ.ಜೆ.ಗಣೇಶ್ ಅವರನ್ನು ಅಭಿನಂದಿಸಲಾಯಿತು. ಅವರ ಮಾರ್ಗದರ್ಶನದಲ್ಲಿ ಮಾಲತಿ ಜಿ. ಪೈ, ಮಹಾಲಕ್ಷ್ಮೀ ಯು. ಶೆಣೈ, ವಿಜಯಲಕ್ಷ್ಮೀ ಕಿಣಿ, ಶ್ರೀ ಗ್ಷೌರಿ ಎಸ್. ನಾಯಕ್, ಶ್ವೇತಾ ಶೆಣೈ, ಅಕ್ಷತಾ ಶೆಣೈ, ನವನೀತ್ ಶೆಣೈ ಹಾಗೂ ಪ್ರಾರ್ಥನಾ ಪೈ ಅವರ ಅಭಿನಯದಲ್ಲಿ ಹರಿಭಕ್ತ ಸುಧನ್ವ ಯಕ್ಷಗಾನ ಬಯಲಾಟ ಜರಗಿತು. ಮೋಹನ್ದಾಸ್ ಪ್ರಭು ಸ್ವಾಗತಿಸಿದರು, ಮಂಡಳಿ ಅಧ್ಯಕ್ಷೆ ಮಾಲತಿ ಪೈ ವಂದಿಸಿದರು. ಆರ್. ನಾರಾಯಣ ಶೆಣೈ ಕಾರ್ಯಕ್ರಮ ನಿರೂಪಿಸಿದರು.