ಅಕ್ರಮ ಆಸ್ತಿ ಗಳಿಕೆ: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಮನೆ, ಕಚೇರಿ ಸಹಿತ ಆರು ಕಡೆ ಎಸಿಬಿ ದಾಳಿ

ಬೆಂಗಳೂರು: ಕೆಎಎಸ್ ಅಧಿಕಾರಿ ಡಾ. ಬಿ. ಸುಧಾ ಅವರ ಬೆಂಗಳೂರಿನ ಮನೆ ಸೇರಿದಂತೆ ಒಟ್ಟು ಆರು ಕಡೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಮತ್ತು ಅವ್ಯವಹಾರ ಸಂಬಂಧ ದೂರುಗಳು ಕೇಳಿಬಂದ ಹಿನ್ನಲೆಯಲ್ಲಿ ಎಸಿಬಿ ಅಧಿಕಾರಿಗಳು ಇಂದು ಬೆಳಿಗ್ಗೆ ಬೆಂಗಳೂರು ಮತ್ತು ಉಡುಪಿಯ ಹೆಬ್ರಿ ಸೇರಿದಂತೆ ಒಟ್ಟು ಆರು ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಬೆಂಗಳೂರು ಕೊಡಿಗೇನಹಳ್ಳಿಯಲ್ಲಿರುವ ನಿವಾಸ, ಸುಧಾ ಅವರಿಗೆ ಸಂಬಂಧಪಟ್ಟ ಯಲಹಂ ಫ್ಲಾಟ್, ಬ್ಯಾಟರಾಯನಪುರದ ಪರಿಚಿತರ ಮನೆ, ಮೈಸೂರು ನಗರ ಶ್ರೀರಾಂಪುರದ ಪರಿಚಿತರ ಮನೆ, ಉಡುಪಿ ಜಿಲ್ಲೆಯ ಹೆಬ್ರಿಯ ಚಂತಾರ್ ತೆಂಕಬೆಟ್ಟಿನ ಪರಿಚಿತರ ಮತ್ತು ಇವರು ಕರ್ತವ್ಯ ನಿರ್ವಹಿಸುತ್ತಿರುವ ಶಾಂತಿನಗರದ ಮಾಹಿತಿ ಮತ್ತು ಜೈವಿಕ ತಂತ್ರಜ್ಞ ಇಲಾಖೆಯ ಆಡಳಿತಾಧಿಕಾರಿ ಕಚೇರಿಯ ಮೇಲೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.

ಸುಧಾ ಅವರ ಪತಿ ನಿರ್ಮಾಪಕ ಸ್ಟ್ರೊನಿ ಫಾಯಿಸ್​ ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆಯ ವೇಳೆ ಸುಧಾ ಅವರ ಪತಿಯ ಬೃಹತ್​ ಅಕ್ರಮಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿದೆ. ಪಾಯಿಸ್ ಸುಧಾ ಕ್ರಿಯೇಷನ್ ಬ್ಯಾನರ್ ಅಡಿ ಚಿತ್ರ ನಿರ್ಮಾಣ ಮಾಡುತ್ತಿದ್ದ. ನಿರ್ಮಾಣದ ಜೊತೆಗೆ ರಿಯಲ್ ಎಸ್ಟೇಟ್ ಹಾಗೂ ಫೈನಾನ್ಸ್ ವ್ಯವಹಾರ ನಡೆಸುತ್ತಿದ ಸುಧಾ ಪತಿರಾಯ, ಹೆಂಡತಿ ಅಕ್ರಮವಾಗಿ ಸಂಪಾದಿಸಿದ್ದ ಆಸ್ತಿಯನ್ನೇ ಬಂಡವಾಳ ಮಾಡಿಕೊಂಡಿದ್ದನು ಎಂಬ ವಿಚಾರ ಬೆಳಕಿಗೆ ಬಂದಿದೆ.

ಹೆಂಡತಿ ಸುಧಾ ಬಿಡಿಎಯ ಭೂಸ್ವಾಧೀನಾಧಿಕಾರಿಯಾಗಿದ್ದಾಗ ಅಕ್ರಮ ಸಂಪತ್ತು ಗುಡ್ಡೆ ಹಾಕತೊಡಗಿದ್ದರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಸ್ಟ್ರೊನಿ ಫಾಯಿಸ್ ರಿಯಲ್ ಎಸ್ಟೇಟ್ ದಂಧೆಗೆ ಇಳಿದಿದ್ದ. ರಿಯಲ್ ಎಸ್ಟೇಟ್ ದಂಧೆಯಲ್ಲಿ ಕೋಟಿ ಕೋಟಿ ಬಾಚುತ್ತಿದ್ದ ಸ್ಟ್ರೊನಿ ಫಾಯಿಸ್​ಗೆ ಹೆಂಡತಿಯ ನೌಕರಿ ಸಹಾಯಕ್ಕೆ ಬಂದಿತ್ತು ಎನ್ನಲಾಗಿದೆ.