ಉಡುಪಿ: ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿಯ ‘ಪವರ್ ಪರ್ಬ’ವನ್ನು ಆನ್ ಲೈನ್ ಮಾದರಿಯಲ್ಲಿ ನಡೆಸಲು ಉದ್ದೇಶಿಸಲಾಗಿದ್ದು, ಅದರಂತೆ ಇದೇ ನವೆಂಬರ್ 7 ಮತ್ತು 8ರಂದು (www.powerparba.com) ನಲ್ಲಿ ‘ಇ- ಪವರ್ ಪರ್ಬ-20’ ಅನ್ನು ಆಯೋಜಿಸಲಾಗಿದೆ ಎಂದು ಪವರ್ ಸಂಸ್ಥೆಯ ಅಧ್ಯಕ್ಷೆ ಪುಷ್ಪಾ ಜಿ. ರಾವ್ ತಿಳಿಸಿದ್ದಾರೆ.
ಈ ಬಗ್ಗೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಈ ಬಾರಿ ಮಹಿಳಾ ಉದ್ಯಮಿಗಳ ಉತ್ಪನ್ನ,ಸೇವೆಗಳ ಪ್ರದರ್ಶನ ಮತ್ತು ಮಾರಾಟಕ್ಕಾಗಿ 100 ‘ಇ-ಮಳಿಗೆ’ಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳಾ ಉದ್ಯಮಿಗಳು ಮತ್ತು ಗ್ರಾಹಕರು ಸಂವಹನಕ್ಕೆ ಅವಕಾಶ, ಉತ್ಪನ್ನಗಳ ಮತ್ತು ಸೇವೆಗಳ ಡಿಜಿಟಲ್ ಕ್ಯಾಟಲಾಗ್, ಬ್ರೋಚರ್ಸ್,ಬಿ2ಬಿ, ಬಿ2ಸಿ ಸಂಪರ್ಕಗಳಿಗೆ ಅವಕಾಶ ಮತ್ತು ಅಂತಾರಾಷ್ಟ್ರೀಯವಾಗಿ ಮಾರುಕಟ್ಟೆಯ ವಿಸ್ತರಣೆಗೆ ಅವಕಾಶ ಮಾಡಲಾಗಿದೆ. ರಾಜ್ಯ ಮತ್ತು ನೆರೆ ರಾಜ್ಯದ ಮಹಿಳಾ ಉದ್ಯಮಿಗಳ ಉತ್ಪನ್ನಗಳಾದ ಕರಕುಶಲ, ಆಭರಣ, ಗೃಹಾಲಂಕಾರ, ಸಿದ್ದ ಉಡುಪು, ವಸ್ತ್ರ ವಿನ್ಯಾಸ, ಚಿತ್ರಕಲೆ ಮೊದಲಾದ ಮಳಿಗೆಗಳು ‘ಇ-ಪರ್ಬಾದ’ ವೈಶಿಷ್ಟ್ಯಗಳು ಎಂದು ಹೇಳಿದರು.
ಪವರ್ ಪ್ಲ್ಯಾಟ್ಫಾರಂ ಆಫ್ ವ್ಯೂಮೆನ್ ಎಂಟರ್ಪ್ರೆನ್ಯೂರ್ಸ್ ರಿಜಿಸ್ಟರ್ಡ್ (ಪವರ್) ಸಂಸ್ಥೆಯನ್ನು ಯಾವುದೇ ಲಾಭದ ಉದ್ದೇಶವಿಲ್ಲದೆ, ಗೃಹೋದ್ಯೋಗ ಹಾಗೂ ಕುಟುಂಬ ಉದ್ಯಮಗಳಲ್ಲಿ ತೊಡಗಿರುವ ಮಹತ್ವಾಕಾಂಕ್ಷಿ ಮಹಿಳಾ ಉದ್ಯಮಿಗಳು ಸದಸ್ಯರಾಗಿರುವ ಸಂಸ್ಥೆಯಾಗಿದೆ. ಮಹಿಳಾ ಉದ್ಯಮಿಗಳಿಗೆ ಪರಸ್ಪರ ಹಾಗೂ ಸಾಮೂಹಿಕ ಕಲಿಕೆ ಮತ್ತು ಗಳಿಕೆಗೆ ವೇದಿಕೆ ಕಲ್ಪಿಸಿಕೊಡುವುದೇ ಇದರ ಮುಖ್ಯ ಉದ್ದೇಶವಾಗಿದೆ. ಎಲ್ಲ ವಿಭಾಗದ ಮಹಿಳಾ ಉದ್ಯಮಿಗಳನ್ನು ಒಗ್ಗೂಡಿಸಿ ಅವರ ಕೌಶಲ ಸಾಮರ್ಥ್ಯವನ್ನು ಪೋಷಿಸಿ ಅವರ ಕನಸುಗಳನ್ನು ನನಸಾಗಿಸುವುದು ಸಂಸ್ಥೆಯ ಮೂಲ ಧ್ಯೇಯವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಯೋಜಕಿ ಡಾ. ಗಾಯತ್ರಿ, ಕಾರ್ಯದರ್ಶಿ ಸುವರ್ಷಾ, ಕೋಶಾಧಿಕಾರಿ ಸುಗುಣಾ, ಸ್ಥಾಪಕಾಧ್ಯಕ್ಷೆ ರೇಣು ಜಯರಾಮ್, ಉಪಾಧ್ಯಕ್ಷೆ ತಾರಾ ತಿಮ್ಮಯ್ಯ, ಎಕ್ಸಿಬಿಟರ್ ಕೋ-ಆರ್ಡಿನೇಟರ್ ನಿವೇದಿತಾ, ಟೆಕ್ನಿಕಲ್ ಕೋ ಆರ್ಡಿನೇಟರ್ ಪಲ್ಲವಿ ಇದ್ದರು.