ಮಣಿಪಾಲ: ಸಿಎಂ ಹೆಸರಿನಲ್ಲಿ ಮಾಹೆಗೆ ಸಂದೇಶ ರವಾನೆ

ಮಣಿಪಾಲ: ಮುಖ್ಯಮಂತ್ರಿ ಹೆಸರಿನಲ್ಲಿ ನಕಲಿ ಇಮೇಲ್ ಐಡಿಯನ್ನು ಸೃಷ್ಟಿಸಿ ಮಣಿಪಾಲದ ಮಾಹೆ ವಿದ್ಯಾಸಂಸ್ಥೆಗೆ ಬೆದರಿಕೆ ಸಂದೇಶ ಕಳುಹಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಿಡಿಗೇಡಿಯೊಬ್ಬ [email protected] ಎಂಬ ನಕಲಿ ಖಾತೆಯನ್ನು ತೆರೆದು ಅದರ ಮೂಲಕ ನವೆಂಬರ್ 1ರಂದು ಬೆಳಿಗ್ಗೆ 4.48ಕ್ಕೆ ಮಾಹೆ ಸಂಸ್ಥೆಗೆ ಮೇಲ್‌ ಸಂದೇಶ ರವಾನಿಸಿದ್ದನು. ಈ ಬಗ್ಗೆ ಮಣಿಪಾಲದ ಮಾಹೆ ನಿರ್ದೇಶಕ ಡಾ. ನಾರಾಯಣ ಸಭಾಯಿತ್ ನೀಡಿದ ದೂರಿನಂತೆ ಸೆನ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಣಿಪಾಲ ಉನ್ನತ ಶಿಕ್ಷಣ ಸಂಸ್ಥೆ (ಮಾಹೆ) ಕಾಲೇಜುಗಳನ್ನು ಆರಂಭಿಸುತ್ತಿರುವ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ದೂರುಗಳು ಬಂದಿವೆ. ಹಾಗಾಗಿ ಜನವರಿ 1ರ ವರೆಗೆ ಕಾಲೇಜುಗಳನ್ನು ತೆರೆಯಬಾರದು. ಆ ಬಳಿಕ ಪೋಷಕರ ಹಾಗೂ ವಿದ್ಯಾರ್ಥಿಗಳ ಅಭಿಪ್ರಾಯ ಪಡೆದುಕೊಂಡೇ ಕಾಲೇಜುಗಳನ್ನು ಆರಂಭಿಸಬೇಕು ಎಂದು ಇಮೇಲ್ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ, ಕೊಠಡಿ ಸಂಖ್ಯೆ 323 ‘ಎ’ ಮೂರನೇ ಮಹಡಿ, ವಿಧಾನಸೌಧ, ಬೆಂಗಳೂರು ಎಂಬ ವಿಳಾಸವನ್ನು ಇಮೇಲ್ ನ ಕೊನೆಯಲ್ಲಿ ಬರೆಯಲಾಗಿದೆ.