ಮಣಿಪಾಲ: ಎಕೆಎಂಎಸ್ ಬಸ್ ಮಾಲೀಕ ಸೈಪುದ್ದೀನ್ ಹತ್ಯೆಗೆ ದುಷ್ಕರ್ಮಿಗಳ ತಂಡವೊಂದು ವಿಫಲ ಯತ್ನ ನಡೆಸಿದ ಘಟನೆ ಇಂದು ಮಣಿಪಾಲ ಲಕ್ಷ್ಮೀಂದ್ರ ನಗರದಲ್ಲಿರುವ ಎಕೆಎಂಎಸ್ ಕಚೇರಿಯಲ್ಲಿ ನಡೆದಿದೆ.
ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ಮಾರಕಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಕಚೇರಿಯೊಳಗೆ ಏಕಾಏಕಿಯಾಗಿ ನುಗ್ಗಿದೆ. ಈ ವೇಳೆ ಸೈಫುದ್ದೀನ್ ಕಚೇರಿಯಲ್ಲಿ ಇರಲಿಲ್ಲ ಎನ್ನಲಾಗಿದೆ. ಆದರೆ ಅಲ್ಲಿಂದ ಆತನ ಆರೇಳು ಮಂದಿ ಸಹವರ್ತಿಗಳಿಗೆ ಬೆದರಿಕೆಯೊಡ್ಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸೈಪುದ್ದೀನ್ ವಿರುದ್ಧ ಕೊಲೆ, ಕೊಲೆಯತ್ನ, ಜೀವಬೆದರಿಕೆ ಸಹಿತ ಹಲವಾರು ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿದೆ. ಅಲ್ಲದೆ ಮುಂಬೈನ ಹೋಟೆಲ್ ವೊಂದರ ಮಾಲೀಕನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಬಂಧನದಲ್ಲಿದ್ದು, ಇದೀಗ ಜಾಮೀನನ ಮೇಲೆ ಹೊರಬಂದಿದ್ದಾನೆ ಎಂದು ಹೇಳಲಾಗುತ್ತಿದೆ.
ಇದೇ ಸಮಯವನ್ನು ಬಳಸಿಕೊಂಡ ದುಷ್ಕರ್ಮಿಗಳು ಆತನ ಹತ್ಯೆ ಸಂಚು ರೂಪಿಸಿದ್ದರು ಎನ್ನಲಾಗಿದೆ. ಆದರೆ ಕಚೇರಿಯಲ್ಲಿ ಇರದಿದ್ದರಿಂದ ಸೈಫುದ್ದೀನ್ ಜೀವ ಉಳಿದಿದೆ ಎಂದು ಆತನ ಆಪ್ತರು ಹೇಳುತ್ತಿದ್ದಾರೆ. ಮಣಿಪಾಲ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.