ಮಂಚಿ: ಜನರಲ್ಲಿ ಭೀತಿ ಹುಟ್ಟಿಸಿದ್ದ ಹೆಬ್ಬಾವು ಕೊನೆಗೂ ಸೆರೆ

ಮಣಿಪಾಲ: ಕಳೆದ ಮೂರ್ನಾಲ್ಕು ದಿನಗಳಿಂದ 80 ಬಡಗಬೆಟ್ಟು ಗ್ರಾಮದ ಮಂಚಿ ರಾಜೀವನಗರ ನಿವಾಸಿಗಳಲ್ಲಿ ಭೀತಿ‌ ಹುಟ್ಟಿಸಿದ್ದ ಭಾರಿ ಗಾತ್ರದ ಹೆಬ್ಬಾವೊಂದು ಕಡೆಗೂ ಸೆರೆಯಾಗಿದೆ.

ನಿನ್ನೆ ರಾತ್ರಿ ರಾಜೀವನಗರದ ಗಣೇಶ್ ಆಚಾರ್ಯ ಎಂಬುವವರ ಮನೆಯ ಸಮೀಪ ಈ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ದೂರದ ಕಾಡಿಗೆ ಬಿಡಲಾಗಿದೆ.
ರಾತ್ರಿ 10 ಗಂಟೆ ಸುಮಾರಿಗೆ ಗಣೇಶ್ ಅವರ ಮನೆಯ ಬೇಲಿಯ ಬದಿಯಲ್ಲಿ ಈ ಹೆಬ್ಬಾವು ಪ್ರತ್ಯೇಕ್ಷಗೊಂಡಿತ್ತು.

ಕೂಡಲೇ ಮನೆಯವರು ಉರಗ ತಜ್ಞ ಸುಧೀರ್ ರಾಜೀವನಗರ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಅವರು ಕೂಡಲೇ ಸ್ಥಳಕ್ಕೆ ಆಗಮಿಸಿ, ಸ್ಥಳೀಯರಾದ ಶಿವಪ್ರಸಾದ್ ರಾಜೀವನಗರ, ಗಣೇಶ್ ಆಚಾರ್ಯ ಹಾಗೂ ವಿಶಾಲ್ ರಾಜೀವನಗರ ಸಹಕಾರದೊಂದಿಗೆ ಹೆಬ್ಬಾವನ್ನು ರಕ್ಷಿಸಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಭೀತಿ ಹುಟ್ಟಿಸಿದ್ದ ಹೆಬ್ಬಾವು:
ಈ ಹೆಬ್ಬಾವು ಕಳೆದ ಮೂರ್ನಾಲ್ಕು ದಿನಗಳಿಂದ ಇದೇ ಪರಿಸರದಲ್ಲಿ ತಿರುಗಾಡುತ್ತಿತ್ತು. ಇದರಿಂದ ಇಲ್ಲಿನ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಕತ್ತಲಲ್ಲಿ ಹೊರಬರಲು ಭಯಪಡುತ್ತಿದ್ದರು.

ಮೂರು ದಿನಗಳ ಹಿಂದೆ ಇಲ್ಲಿನ ಜಗನ್ನಾಥ್ ಎಂಬುವವರ ಮನೆಯ ಸಮೀಪ ಈ ಹೆಬ್ಬಾವು ಕಾಣಿಸಿಕೊಂಡಿತ್ತು. ಬಳಿಕ ಬೇಲಿಯ ಕಡೆಗೆ ಹೋದ ಹೆಬ್ಬಾವನ್ನು‌ ಸ್ಥಳೀಯ ಕೆಲ ಯುವಕರು ಹಿಡಿಯಲು ಯತ್ನಿಸಿದ್ದರು. ಆದರೆ ಹೆಬ್ಬಾವು ಅವರ ಕೈಯಿಂದ ತಪ್ಪಿಸಿಕೊಂಡು ಕಣ್ಮರೆಯಾಗಿತ್ತು. ಇದೀಗ ಹೆಬ್ಬಾವು ಸೆರೆಯಾಗಿದ್ದು, ಇಲ್ಲಿನ ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.