ಉಡುಪಿ: ಸರಕಾರ ಯಾವುದೇ ಶ್ರಮಪಡದೆ ಆರಾಮಾಗಿ ಎಸಿ ಕೊಠಡಿಯಲ್ಲಿ ಕುಳಿತು ಬರೆಯುವವರ ಸಾಹಿತ್ಯ ಅಕಾಡೆಮಿಗೂ 1 ಕೋಟಿ ರೂ. ಹಾಗೂ ಊರೂರು ಅಲೆದಾಟ ನಡೆಸಿ ಹಗಲಿರುಳು ದುಡಿಯುವ ನಾಟಕ ಅಕಾಡೆಮಿಗೂ ಅಷ್ಟೇ ವಾರ್ಷಿಕ ಅನುದಾನ ನೀಡುತ್ತಿದೆ. ಇದು ಸರಿಯದ ಕ್ರಮ ಅಲ್ಲ ಎಂದು ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಜೆ.ಲೋಕೇಶ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನಾಟಕ ಅಕಾಡೆಮಿಗೆ ನೀಡುವ 1 ಕೋಟಿ ಅನುದಾನ ಯಾವುದಕ್ಕೂ ಸಾಲುವುದಿಲ್ಲ. ಸಿಬ್ಬಂದಿಗಳಿಗೆ ವೇತನ ನೀಡಲು 35 ಲಕ್ಷ ಖರ್ಚಾದರೆ, ಉಳಿದ 65 ಲಕ್ಷ ಅನುದಾನದಲ್ಲಿ ರಂಗಚಟುವಟಿಕೆ ಮಾಡಲು ಏನೂ ಸಾಲದು. ಆದ್ದರಿಂದ ಅಕಾಡೆಮಿಗೆ ನೀಡುವ ಅನುದಾನವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದರು.
ಸರ್ಕಾರ ಅನುದಾನ ಬಿಡುಗಡೆಗೆ ಮಾಡುವ ಮೊದಲೇ ಕ್ರಿಯಾಯೋಜನೆ ಸಲ್ಲಿಸಬೇಕೆಂಬ ಹೊಸ ನಿಯಮ ಜಾರಿಗೊಳಿಸಿದೆ. ಅದರಂತೆ 2 ವರ್ಷಗಳಿಂದ ಕ್ರಿಯಾಯೋಜನೆ ಸಲ್ಲಿಸಲಾಗಿದೆ, ಆದರೆ ಅದು ಏನಾಗಿದೆ ಎಂಬುವುದರ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದರು.
ಪ್ರತಿಯೊಂದು ಜಿಲ್ಲೆ ಮತ್ತು ತಾಲೂಕುಗಳಲ್ಲಿ ಪ್ರತ್ಯೇಕ ರಂಗಮಂದಿರಗಳನ್ನು ನಿರ್ಮಿಸುವುದಕ್ಕಾಗಿ ರಂಗಮಂದಿರಗಳ ಪ್ರಾಧಿಕಾರವನ್ನು ರಚಿಸಬೇಕು. ಪ್ರಸ್ತುತ ಪಿಡಬ್ಲ್ಯುಡಿಗೆ ರಂಗಮಂದಿರಗಳನ್ನು ನಿರ್ಮಾಣ ಮಾಡುವ ಹೊಣೆ ನೀಡಲಾಗುತ್ತಿದೆ. ಪಿಡಬ್ಲ್ಯುಡಿಯವರು 50 – 60 ಮಂದಿ ನಾಟಕ ನೋಡುಗರ ಊರಿನಲ್ಲಿ ಸಾವಿರ ಮಂದಿರ ಕುಳಿತುಕೊಳ್ಳುವ ಬೃಹತ್ ರಂಗಮಂದಿರ ನಿರ್ಮಾಣಕ್ಕೆ 10 – 15 ಕೋಟಿ ರು.ಗಳ ಯೋಜನೆ ರೂಪಿಸುಸುತ್ತಾರೆ. ಮೊದಲು ಬಿಡುಗಡೆಯಾಗುವ 1 ಕೋಟಿ ರು.ಗಳಲ್ಲಿ ನಾಲ್ಕು ಕಂಬಗಳನ್ನು ನಿರ್ಮಿಸುತ್ತಾರೆ. ನಂತರ ಹಣವೂ ಇಲ್ಲ, ರಂಗಮಂದಿರವೂ ಇಲ್ಲ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಆದ್ದರಿಂದ ಸರ್ಕಾರ ರಂಗಮಂದಿರಗಳ ಪ್ರಾಧಿಕಾರವನ್ನು ರಚಿಸಿ, ಅದಕ್ಕೆ 40 ಕೋಟಿ ರು. ಅನುದಾನ ನೀಡಿ, ಅದರ ಮೂಲಕ ಪ್ರತಿ ತಾಲೂಕಿನಲ್ಲಿ 100 X 200 ಅಡಿ ಜಮೀನಿನಲ್ಲಿ ಕೇವಲ 50 ಲಕ್ಷ ರು.ಗಳಲ್ಲಿ ವಾಹನ ಪಾರ್ಕಿಂಗ್ ಸಹಿತ ಅತ್ಯಂತ ಸುಸಜ್ಜಿತ ರಂಗಮಂದಿರವನ್ನು ಅತ್ಯಂತ ಕಲಾತ್ಮಕವಾಗಿ ನಿರ್ಮಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ರಂಗಕರ್ಮಿ ಬಾಸುಮ ಕೊಡಗು ಇದ್ದರು.