ಉಡುಪಿ: ಜಿಲೆಯಲ್ಲಿ ಮಾದಕವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪರೇಡ್ ಇಂದು ಉಡುಪಿಯ ಚಂದು ಮೈದಾನದಲ್ಲಿ ನಡೆಯಿತು.
ಪರೇಡ್ ಉದ್ದೇಶಿಸಿ ಮಾತನಾಡಿದ ಎಸ್ಪಿ ಎನ್. ವಿಷ್ಣುವರ್ಧನ ಅವರು, ಮಾದಕವಸ್ತು ಮಾರಾಟ, ಬಳಕೆಯಂತಹ ಸಮಾಜದ್ರೋಹಿ ಕೃತ್ಯಗಳಲ್ಲಿ ಭಾಗವಹಿಸದೆ, ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಉತ್ತಮವಾಗಿ ಜೀವನ ನಡೆಸಬೇಕೆಂದು ಆರೋಪಿಗಳಿಗೆ ಕರೆ ನೀಡಿದರು.
ಇನ್ಮುಂದೆ ಇಂತಹ ಪ್ರವೃತ್ತಿಗಳನ್ನು ಮುಂದುವರಿಸಿಕೊಂಡು ಹೋದರೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಎಎಸ್ಪಿ ಕುಮಾರಚಂದ್ರ, ಡಿವೈಎಸ್ಪಿ ಟಿ.ಆರ್. ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಉಡುಪಿ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್ ಹಾಗೂ ಜಿಲ್ಲೆಯ ಇತರ ಠಾಣೆಗಳ ಪೊಲೀಸ್
ಉಪನಿರೀಕ್ಷಕರು ಉಪಸ್ಥಿತರಿದ್ದರು.
ಬೈಂದೂರು ಠಾಣಾ ವ್ಯಾಪ್ತಿಯಿಂದ ಇಬ್ಬರು, ಕುಂದಾಪುರ ಠಾಣಾ ವ್ಯಾಪ್ತಿಯಿಂದ 18, ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಿಂದ 4, ಕೋಟಾ ಠಾಣಾ ವ್ಯಾಪ್ತಿಯಿಂದ ಇಬ್ಬರು, ಉಡುಪಿ ನಗರ ಠಾಣಾ
ವ್ಯಾಪ್ತಿಯಿಂದ 12, ಮಲ್ಪೆ ಠಾಣಾ ವ್ಯಾಪ್ತಿಯಿಂದ 5, ಮಣಿಪಾಲ ಠಾಣಾ ವ್ಯಾಪ್ತಿಯಿಂದ 16, ಸೆನ್ ಠಾಣಾ
ವ್ಯಾಪ್ತಿಯಿಂದ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿಯಿಂದ 2, ಪಡುಬಿದ್ರಿ ಠಾಣಾ ವ್ಯಾಪ್ತಿಯಿಂದ 5, ಕಾಪು ಠಾಣಾ ವ್ಯಾಪ್ತಿಯಿಂದ 3 ಹಾಗೂ ಹಿರಿಯಡಕ ಠಾಣಾ ವ್ಯಾಪ್ತಿಯಿಂದ ಓರ್ವ ಆರೋಪಿ ಸೇರಿದಂತೆ ಒಟ್ಟು 72 ಮಂದಿ ಆರೋಪಿಗಳು ಪರೇಡ್ ನಲ್ಲಿ ಹಾಜರಿದ್ದರು.