ಪಟ್ನಾ: ಐದು ವರ್ಷಗಳ ನಿತೀಶ್ ಕುಮಾರ್ ಆಳ್ವಿಕೆಯಲ್ಲಿ ಬಿಹಾರದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ಅವರಿಗೆ ಜೈಲೇ ಸೂಕ್ತವಾದ ಸ್ಥಳ ಎಂದು ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ನಾಯಕ ಚಿರಾಗ್ ಪಾಸ್ವಾನ್ ಆರೋಪ ಮಾಡಿದರು.
ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮತ್ತೆ ಬಿಹಾರ ಸಿಎಂ ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಮೊದಲ ಹಂತದ ಚುನಾವಣೆಗೆ ಕೆಲವೇ ದಿನ ಬಾಕಿ ಇರುವಾಗ ನಿತೀಶ್ ವಿರುದ್ಧ ದಾಳಿಯನ್ನು ಇನ್ನಷ್ಟು ತೀವ್ರಗೊಳಿಸಿದ್ದಾರೆ.
ಇದೀಗ ಒಂದು ಹೆಜ್ಜೆ ಮುಂದೆ ಹೋಗಿರುವ ಚಿರಾಗ್, ನಿತೀಶ್ ಕುಮಾರ್ ಹಗರಣಗಳಲ್ಲಿ ಭಾಗಿಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಅವರು ತಪ್ಪಿತಸ್ಥರಾಗಿದ್ದರೆ, ತನಿಖೆಯ ನಂತರ ಅವರನ್ನು ಜೈಲಿಗೆ ಕಳುಹಿಸಲಾಗುತ್ತದೆ ಎಂದು ಕಿಡಿಕಾರಿದರು.
ಬಿಹಾರದಲ್ಲಿ ಮದ್ಯ ನಿಷೇಧ ಎಂಬುವುದು ಕೇವಲ ಹೆಸರಿಗೆ ಮಾತ್ರ. ದೊಡ್ಡಮಟ್ಟದಲ್ಲಿ ಮದ್ಯ ಕಳ್ಳಸಾಗಣೆ ಆಗುತ್ತಿದೆ. ರಾಜ್ಯ ಸರ್ಕಾರವೇ ಮದ್ಯ ಕಳ್ಳಸಾಗಣೆಯಲ್ಲಿ ತೊಡಗಿದೆ ಎಂದು ದೂರಿದರು.