ಆಹಾರ ಕಿಟ್ ಹಗರಣ: ಕಾರ್ಕಳ ಶಾಸಕ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಕಾರ್ಕಳ: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಸಹಾಯವಾಗಲೆಂದು ಕರ್ನಾಟಕ ಕಟ್ಟಡ ಕಾರ್ಮಿಕ ಇಲಾಖೆಯು ಕಾರ್ಕಳಕ್ಕೆ 44,95,000 ಮೌಲ್ಯದ 5,000 ಆಹಾರ ಕಿಟ್ಟನ್ನು ಬಿಡುಗಡೆಗೊಳಿಸಿದ್ದು, ಈ ಆಹಾರ ಕಿಟ್ಟನ್ನು ಯಾರೊಬ್ಬರಿಗೂ ವಿತರಿಸಿದೆ ಬೋಗಸ್ ಪಟ್ಟಿಯನ್ನು ತಯಾರಿಸಿ ಭ್ರಷ್ಟಚಾರ ನಡೆಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ರಾಜ್ಯ ಲೋಕಾಯುಕ್ತರ ಕಚೇರಿಯಲ್ಲಿ ದೂರು ಸಲ್ಲಿಸಲಾಗಿದೆ ಎಂದು ಕಾಂಗ್ರೆಸ್ ಪುರಸಭಾ ಸದಸ್ಯ ಶುಭದ್ ರಾವ್ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆ ಬಿಡುಗಡೆಗೊಳಿಸಿದ ಅನುದಾನದಲ್ಲಿ ಕಾರ್ಕಳ ಶಾಸಕರು ವಿತರಿಸಿದ್ದಾರೆ ಎನ್ನಲಾದ ಸರಕಾರಕ್ಕೆ ಸಲ್ಲಿಸಿದ್ದ ಫಲಾನುಭವಿಗಳ ಪಟ್ಟಿಯಲ್ಲಿ ಸತ್ತವರು ಮತ್ತು ಆಹಾರ ಕಿಟ್ಟನ್ನು ಪಡೆಯದೇ ಇದ್ದವರ ಹೆಸರುಗಳೇ ಇದ್ದು, ಇದೊಂದು ಉದ್ದೇಶಪೂರ್ವಕವಾಗಿ ತಯಾರಿಸಿದ ಬೋಗಸ್ ಪಟ್ಟಿಯಾಗಿದೆ.

ಈ ಪಟ್ಟಿಯಲ್ಲಿರುವ ಯಾರೊಬ್ಬರೂ ಕಾರ್ಮಿಕ ಇಲಾಖೆಯ ಆಹಾರ ಕಿಟ್ ಪಡೆದಿರುವ ಬಗ್ಗೆ ಯಾವುದೇ ದಾಖಲೆಗಳಿಲ್ಲ. ಆದ್ದರಿಂದ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರಕಾರದ ಹಣವನ್ನು ಲೂಟಿ ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕಾರ್ಕಳ ಶಾಸಕರು, ಜಿಲ್ಲಾ ಕಾರ್ಮಿಕ ಅಧಿಕಾರಿ ಮತ್ತು ತಾಲೂಕು ಕಾರ್ಮಿಕ ಅಧಿಕಾರಿಯವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.