ಸಾಲಗಾರರಿಗೆ ಬಿಗ್ ರಿಲೀಫ್ ನೀಡಿದ ಸುಪ್ರೀಂ ಕೋರ್ಟ್: ನ.15ರ ವರೆಗೆ ಕಟ್ಟಬೇಕಿಲ್ಲ ಚಕ್ರಬಡ್ಡಿ

ನವದೆಹಲಿ: ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದುಕೊಂಡವರಿಗೆ ಸುಪ್ರೀಂಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ನವೆಂಬರ್ 15ರ ವರೆಗೆ ಬಡ್ಡಿ ಮೇಲೆ ಬಡ್ಡಿಯನ್ನು ಗ್ರಾಹಕರು ಪಾವತಿಸಬೇಕಾಗಿಲ್ಲ ಎಂದು ಕೋರ್ಟ್ ಆದೇಶಿಸಿದೆ.

ನ. 15ರ ವರೆಗೆ ಯಾವುದೇ ಸಾಲ ಖಾತೆಯನ್ನು ನಿಷ್ಕ್ರಿಯ ಆಸ್ತಿ ಎಂದು ಘೋಷಿಸಲಾಗುವುದಿಲ್ಲ ಎಂದು ಹೇಳಿರುವ ಕೋರ್ಟ್‌, ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ ಮನವಿಯ ಮೇರೆಗೆ ಪ್ರಕರಣದ ವಿಚಾರಣೆಯನ್ನು ನವೆಂಬರ್ 2 ರವರೆಗೆ ಮುಂದೂಡಿದೆ.

ಬಡ್ಡಿ ಮನ್ನಾ ಯೋಜನೆಯನ್ನು ಶೀಘ್ರದಲ್ಲೇ ಜಾರಿಗೆ ತರಬೇಕೆಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಇದನ್ನು ಜಾರಿಗೆ ತರಲು ಒಂದು ತಿಂಗಳು ಏಕೆ ಬೇಕೆಂದು ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿತ್ತು. ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್ ಎಲ್ಲ ಸಾಲಗಳನ್ನು ವಿಭಿನ್ನ ರೀತಿಯಲ್ಲಿ ನೀಡಲಾಗಿದೆ. ಹಾಗಾಗಿ ನವೆಂಬರ್ 2 ರೊಳಗೆ ಸರ್ಕಾರ ಸುತ್ತೋಲೆ ಜಾರಿಗೆ ತರಲಿದೆ ಎಂದಿದ್ದರು. ಇದಕ್ಕೆ ಸುಪ್ರೀಂ ಒಪ್ಪಿಗೆ ನೀಡಿದೆ.

ಸರ್ಕಾರ ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಾಲಗಳ ಮೇಲಿನ ಇಎಂಐಗೆ ವಿನಾಯಿತಿ ನೀಡಿತ್ತು. ಮೊತ್ತದ ಮೇಲೆ ಬಡ್ಡಿಯನ್ನು ನಿಗದಿಪಡಿಸಿತ್ತು. ಆದರೆ ಇಎಂಐ ಮೊತ್ತದ ಮೇಲೆ ಬಡ್ಡಿ ಹೇರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.