ಮುಡಿಪು: ಬಾಳೆಪುಣಿ ಗ್ರಾಮದ ಬೆಳ್ಳೇರಿ ಎಂಬಲ್ಲಿ ನಡೆದ ಅವಿವಾಹಿತ ಮಹಿಳೆಯೊಬ್ಬರ ಅತ್ಯಾಚಾರ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯೊಬ್ಬನನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಸೆ. 26ರಂದು ಬಾಳೆಪುಣಿ ಗ್ರಾಮದ ಅವಿವಾಹಿತೆ ಮಹಿಳೆ ಕುಸುಮ (53) ಎಂಬುವವರ ಮೇಲೆ ಅತ್ಯಾಚಾರ ಎಸಗಿ, ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು. ಕುಸುಮ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತಿದ್ದರು. ಬಂಧಿತ ಆರೋಪಿ ಸಕಲೇಶಪುರದ 30ರ ಹರೆಯದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಕಳ್ಳತನಕ್ಕೆ ಬಂದವ ಕೊಲೆಗೈದ:
ಕಳ್ಳತನಕ್ಕೆ ಮನೆಯೊಳಗೆ ನುಗ್ಗಿದ್ದ ಆರೋಪಿ ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆಸಿ ಅತ್ಯಾಚಾರ ನಡೆಸಿದ್ದನು. ಬಳಿಕ ಮನೆಯಲ್ಲಿದ್ದ ಬಂಗಾರ, ನಗದು ಕಳ್ಳತನ ನಡೆಸಿದ್ದಾನೆ. ಗಂಭೀರ ಹಲ್ಲೆಯಿಂದ ಮಹಿಳೆ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿತ್ತು. ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು ಇದೀಗ ಪ್ರಮುಖ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿ ಸಕಲೇಶಪುರದವನಾಗಿದ್ದು, ಆತನ ಪತ್ನಿಯ ಮನೆ ಮುಡಿಪು ಸಮೀಪ ಪಾತೂರು ಆಗಿತ್ತು. ಅಲ್ಲಿ ಕೂಡ ಸ್ವಲ್ಪ ಸಮಯ ವಾಸವಾಗಿದ್ದ. ಅಲ್ಲದೆ ಹೂಹಾಕುವ ಕಲ್ಲು ಬಳಿ ನವಗ್ರಾಮ ಸೈಟ್ ನಲ್ಲಿ ಹಿಂದೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಇದೇ ಸಂದರ್ಭದಲ್ಲಿ ಕುಸುಮ ಅವರ ಮನೆ ಸಮೀಪದ ತೋಟದ ಕೆಲಸಕ್ಕೂ ಆತ ಬಂದಿದ್ದನು ಎನ್ನಲಾಗಿದೆ. ಈ ಸಂದರ್ಭದಲ್ಲಿ ಮಹಿಳೆಯ ಬಗ್ಗೆ ಈತ ಮಾಹಿತಿ ತಿಳಿದುಕೊಂಡಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.