ಉಡುಪಿ: ಮಹಿಳೆಯೊಬ್ಬರು ತನ್ನ ಆಟೊ ರಿಕ್ಷಾದಲ್ಲಿ ಮರೆತು ಬಿಟ್ಟು ಹೋಗಿದ್ದ 50 ಸಾವಿರ ರೂ.ಗಳನ್ನು ಮರಳಿ ನೀಡುವ ಮೂಲಕ ಆಟೊ ಚಾಲಕ ಮಾನವೀಯತೆ ಮೆರೆದ ಘಟನೆ ಕಟಪಾಡಿಯಲ್ಲಿ ನಡೆದಿದೆ.
ಆಟೊ ಚಾಲಕ ಅಂಬಲಪಾಡಿ ಜಯ ಶೆಟ್ಟಿ ಅವರ ಆಟೊದಲ್ಲಿ ಬುಧವಾರ ಬೆಳಗ್ಗೆ ಕುರ್ಕಾಲಿನಿಂದ ಮಹಿಳೆಯೊಬ್ಬರು ಕಟಪಾಡಿಗೆ ಬಾಡಿಗೆ ಮಾಡಿಕೊಂಡು ಬಂದಿದ್ದರು. ಆದರೆ ಅವರು ಇಳಿಯುವ ಗಡಿಬಿಡಿಯಲ್ಲಿ 50 ಸಾವಿರ ರೂ.ಗಳ ಚೀಲವನ್ನು ರಿಕ್ಷಾದಲ್ಲೇ ಮರೆತುಬಿಟ್ಟು ಹೋಗಿದ್ದರು.
ಆ ಮಹಿಳೆಯನ್ನು ಕಟಪಾಡಿ ಬಸ್ ನಿಲ್ದಾಣಕ್ಕೆ ಬಿಟ್ಟು ಉಡುಪಿಯ ಅಂಬಲಪಾಡಿ ಜಂಕ್ಷನ್ ನ ಆಟೊ ಸ್ಟ್ಯಾಂಡಿಗೆ ಮರಳಿ ಬಂದ ಜಯ ಶೆಟ್ಟಿಯವರು, ರಿಕ್ಷಾದ ಸೀಟ್ನಲ್ಲಿ ಪ್ಲಾಸ್ಟಿಕ್ ಚೀಲ ಇರುವುದನ್ನು ಗಮನಿಸಿದ್ದಾರೆ. ತಕ್ಷಣವೇ ರಿಕ್ಷಾ ನಿಲ್ಲಿಸಿ ಚೀಲವನ್ನು ತೆರೆದಾಗ ಅದರಲ್ಲಿ 50ಸಾವಿರ ಹಣ ಇರುವುದು ಕಂಡುಬಂದಿದೆ.
ತಕ್ಷಣವೇ ಕಟಪಾಡಿಗೆ ತೆರಳಿದ ಜಯ ಶೆಟ್ಟಿಯವರು, ಕುರ್ಕಾಲಿನಿಂದ ಬಂದ ಮಹಿಳೆಯನ್ನು ಪತ್ತೆ ಮಾಡಿ 50 ಸಾವಿರ ರೂ.ಗಳನ್ನು ಮರಳಿಸಿ ಮಾದರಿ ಎನಿಸಿದ್ದಾರೆ. ಇವರ ಈ ಕಾರ್ಯ ಇತರೆ ಆಟೊ ಚಾಲಕರಿಗೆ ಮಾದರಿಯಾಗಿದೆ.