ಉಡುಪಿ: ಮಂಗನ ಕಾಯಿಲೆ ದಿನದಿಂದ ದಿನಕ್ಕೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಿದ್ದು, ಜನರಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸುತ್ತಿದೆ. ಈ ಮಧ್ಯೆ ಫ್ರಾನ್ಸ್ ದೇಶದ ಮಹಿಳೆಯೊಬ್ಬರಲ್ಲಿ ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು, ಇಂದು ಮಂಗನ ಕಾಯಿಲೆ ಚಿಕಿತ್ಸೆಗಾಗಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಫ್ರಾನ್ಸ್ ನಿಂದ ಬಂದಿರುವ 33ರ ಹರೆಯದ ಈ ಮಹಿಳೆ ತನ್ನ ಗಂಡನೊಂದಿಗೆ ಉತ್ತರ ಕನ್ನಡ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದುಬಂದಿದೆ.
ಧಾರ್ಮಿಕ ಕ್ಷೇತ್ರದ ಪ್ರವಾಸಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಆಕೆ ಬಳಿಕ ಅಲ್ಲಿಂದ ಉತ್ತರ ಕನ್ನಡದ ಯಾಣ ಪ್ರವಾಸ ಕೈಗೊಂಡಿದ್ದಳು. ಯಾಣಕ್ಕೆ ಅರಣ್ಯ ಮಾರ್ಗದಲ್ಲಿ ಸಾಗಬೇಕಾಗಿರುವುದರಿಂದ ಅಲ್ಲಿ ಆಕೆಗೆ ಮಂಗನಕಾಯಿಲೆಯ ಸೋಂಕು ಬಾಧಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಅಲ್ಲಿಂದ ಮರಳಿದ ನಂತರ ಆಕೆಗೆ ಜ್ವರ ಕಾಣಿಸಿಕೊಂಡಿತ್ತು. ಮೊದಲು ಗೋಕರ್ಣದಲ್ಲಿ ಬಳಿಕ ಕುಮಟಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಆದರೂ ಜ್ವರದಿಂದ ಗುಣಮುಖರಾಗದಿದ್ದಾಗ ಅವರನ್ನು ಮಣಿಪಾಲಕ್ಕೆ ದಾಖಲಿಸಲಾಗಿತ್ತು. ಆಕೆಯ ದೇಹದಲ್ಲಿ ಕೆಎಫ್ ಡಿ ವೈರಸ್ ಪತ್ತೆಯಾಗಿದ್ದು, ಮಣಿಪಾಲದಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳಿಂದ ತಿಳಿದುಬಂದಿದೆ.
ಎರಡು ಮಂಗನ ಶವ ಪತ್ತೆ:
ಜಿಲ್ಲೆಯಲ್ಲಿ ಮಂಗನ ಸಾವಿನ ಸರಣಿ ಮುಂದುವರಿದಿದ್ದು, ಇಂದು ಎರಡು ಮಂಗನ ಶವ ಪತ್ತೆಯಾಗಿದೆ. ಹಳ್ಳಿಹೊಳೆ ಹಾಗೂ ಉಡುಪಿ ಸಮೀಪದ ಮಣಿಪುರದಲ್ಲಿ ಮೃತ ಮಂಗನ ಶವ ಪತ್ತೆಯಾಗಿದೆ. ಮಂಗನ ಅಂಗಾಂಗಗಳನ್ನು ಪರೀಕ್ಷೆ ನಡೆಸಿ ಪುಣೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ReplyForward
|