ಬೆಂಗಳೂರು: 2018ರ ವಿಧಾನಸಭೆ ಚುನಾವಣೆಯಲ್ಲಿ ಮುನಿರತ್ನ ಅಕ್ರಮ ನಡೆಸಿದ್ದಾರೆ ಎಂದು ಆರೋಪಿಸಿ ಪರಾಜಿತ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಇಂದು ವಜಾಗೊಳಿಸಿದೆ.
ಇದರಿಂದ ಮುನಿರತ್ನ ಅವರಿಗೆ ಆರ್ ಆರ್ ನಗರ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅಡ್ಡಿಯಾಗಿದ್ದ ಆತಂಕ ದೂರವಾಗಿದೆ.
ರಾಜ್ಯ ವಿಧಾನಸಭೆಗೆ 2018ರಲ್ಲಿ ನಡೆದ ಚುನಾವಣೆ ಸಂದರ್ಭ ಆರ್.ಆರ್. ನಗರ ಕ್ಷೇತ್ರದ ಅಭ್ಯರ್ಥಿ ಮುನಿರತ್ನ ಅವರು ಅಕ್ರಮ ಎಸಗಿ ಗೆಲುವು ಸಾಧಿಸಿದ್ದಾರೆ. ಆದ್ದರಿಂದ ಅರ್ಜಿ ಇತ್ಯರ್ಥ ಆಗುವವರೆಗೆ ಕ್ಷೇತ್ರದ ಉಪ ಚುನಾವಣೆ ನಡೆಸಕೂಡದು ಎಂದು ತುಳಸಿ ಮುನಿರಾಜು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಚುನಾವಣೆ ವೇಳೆ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದವು. ಈ ಅಕ್ರಮದಲ್ಲಿ ಮುನಿರತ್ನ ಭಾಗಿಯಾದ ಆರೋಪವಿದೆ. ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗೆ ಹತ್ತಿರದ ಪ್ರತಿಸ್ಫರ್ಧಿಯಾಗಿದ್ದ ನನ್ನನ್ನು ಜಯಶಾಲಿ ಎಂದು ಘೋಷಿಸಬೇಕು ಎಂದು ಮೇಲ್ಮನವಿ ಉಲ್ಲೇಖಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿತ್ತು. ಇಂದು ಅರ್ಜಿ ವಜಾಗೊಳಿಸಿ ಆದೇಶ ನೀಡಿದೆ.












