ಪಡುಬಿದ್ರಿ: ಮೀನುಗಾರಿಕೆಗೆ ತೆರಳಿದ ನಾಡದೋಣಿಯೊಂದು ಹೆಜಮಾಡಿ ಕೋಡಿಯ ಅಳಿವೆ ಬಾಗಿಲ ಬಳಿ ಸಮುದ್ರದ ಅಲೆಗಳ ಅಬ್ಬರಕ್ಕೆ ಮಗುಚಿಬಿದ್ದಿದ್ದು, ಇದರಿಂದ ಮೀನುಗಾರನೋರ್ವ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮೃತಪಟ್ಟ ಮೀನುಗಾರನನ್ನು ಹೆಜಮಾಡಿಯ ನಿವಾಸಿ ಸುಕೇಶ್ ಪುತ್ರನ್ (24) ಎಂದು ಗುರುತಿಸಲಾಗಿದೆ.
ಅ. 11ರಂದು ಬೆಳಿಗ್ಗೆ 6 ಗಂಟೆಗೆ ಸ್ನೇಹ-1 ಎಂಬ ಹೆಸರಿನ ನಾಡದೋಣಿಯಲ್ಲಿ ರಾಜೇಶ್ ಪುತ್ರನ್, ನೀರಜ್ ಕರ್ಕೆರ, ಪಾಡುರಂಗ ಕೋಟ್ಯಾನ್, ನಾಗೇಶ್ ಸಾಲ್ಯಾನ್, ಸುಕೇಶ್ ಪುತ್ರನ್ ಅವರು ಮೀನುಗಾರಿಕೆ ತೆರಳಿದ್ದರು.
ಅಂದು ಸಂಜೆ 6.45 ಸುಮಾರಿಗೆ ಮೀನು ಹಿಡಿದು ವಾಪಾಸ್ಸು ಬರುತ್ತಿರುವಾಗ ಹೆಜಮಾಡಿ ಕೋಡಿಯ ಅಳಿವೆ ಬಾಗಿಲ ಬಳಿ ದೈತ್ಯಾಕಾರದ ಸಮುದ್ರದ ಅಲೆಯೊಂದು ದೋಣಿಗೆ ಅಪ್ಪಳಿಸಿದ್ದು, ಇದರಿಂದ ದೋಣಿ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.
ದೋಣಿಯಲ್ಲಿದ್ದ ಬಲೆ ಹಾಗೂ ಹಿಡಿದ ಮೀನು ಸಮುದ್ರದ ಪಾಲಾಗಿದ್ದು, ನೀರಿನಲ್ಲಿ ಬಿದ್ದು ಈಜುತ್ತಿದ್ದ ಐದು ಮಂದಿ ಮೀನುಗಾರರನ್ನು ಇತರೆ ಎರಡು ನಾಡದೋಣಿಯವರು ರಕ್ಷಣೆ ಮಾಡಿದ್ದಾರೆ. ಆದರೆ ಸುಕೇಶ್ ಪುತ್ರನ್ ಎಂಬುವವರು ನೀರು ಪಾಲಾಗಿದ್ದರು.
ಅ. 12ರಂದು ಅವರ ಮೃತದೇಹ ಹೆಜಮಾಡಿ ಕರಾವಳಿ ಕಾವಲು ಪೊಲೀಸ್ ಠಾಣೆ ವ್ಯಾಪ್ತಿಯ 500 ಮೀಟರ್ ದಕ್ಷಿಣ ದಿಕ್ಕಿನ ಸಮುದ್ರದ ದಂಡೆಯಲ್ಲಿ ಪತ್ತೆಯಾಗಿದೆ. ಈ ಬಗ್ಗೆ ದೋಣಿ ಮಾಲೀಕ ಏಕನಾಥ ಕರ್ಕೇರ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












