ಉಡುಪಿ: ರಾಜ್ಯದಲ್ಲಿರುವ ವಿವಿಧ ಇಲಾಖೆಗಳ ವಸತಿ ನಿಲಯಗಳ ಸ್ಥಿತಿಗತಿ ಕುರಿತಂತೆ, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಖುದ್ದು ಭೇಟಿ ನೀಡಿ ವರದಿಯನ್ನು ಸಿದ್ದಪಡಿಸಿದ್ದು, ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಕೆ ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಹೇಳಿದ್ದಾರೆ.
ಅವರು ಶನಿವಾರ, ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಸತಿ ನಿಲಯಗಳಲ್ಲಿ ಮಕ್ಕಳ ಸುರಕ್ಷತೆ ಮತ್ತು ರಕ್ಷಣಾ ನೀತಿಗೆ ಸಂಬಂಧಿಸಿದಂತೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳು ಅಲ್ಲಿನ ಸ್ಥಿತಿಗತಿ ಅವ್ಯವಸ್ಥೆ ಕುರಿತು ಹಲವು ದೂರು ನೀಡಿದ್ದು, ಈ ಬಗ್ಗೆ ಪರಿಶೀಲನೆಗೆ ರಾಜ್ಯದಲ್ಲಿನ ಬಹುತೇಕ ಎಲ್ಲಾ ಜಿಲ್ಲೆಗಳ ವಸತಿ ನಿಲಯಗಳಿಗೆ ಭೇಟಿ ನೀಡಿದ್ದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ವಿದ್ಯಾರ್ಥಿಗಳನ್ನು ಭೇಟಿ ಮಾಡಿ ಅವರ ಆಭಿಪ್ರಾಯಗಳನ್ನೂ ಸಂಗ್ರಹಿಸಿ, ವಸತಿನಿಲಯಗಳಲ್ಲಿ ಆಗಬೇಕಿರುವ ಸುಧಾರಣೆಗಳ ಕುರಿತು ವರದಿ ಸಿದ್ದಪಡಿಸಿದ್ದು, ಈ ವರದಿಯಲ್ಲಿ ವಸತಿನಿಲಯಗಳಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಒಗದಿಸುವುದು, ವಾರ್ಡನ್ಗಳಿಗೆ ಹಾಸ್ಟೆಲ್ ಆವರಣದಲ್ಲಿ ವಸತಿ ಗೃಹ ನಿರ್ಮಾಣ, ವಿದ್ಯಾರ್ಥಿಗಳಿಗೆ ನೀಡಲಾಗುವ ಆಹಾರದ ಪ್ರಮಾಣ ಹೆಚ್ಚಳ, ಹಾಸ್ಟೆಲ್ಗಳಲ್ಲಿ ರಕ್ಷಣಾ ಸಮಿತಿಗಳನ್ನು ರಚಿಸಿಕೊಂಡು ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗೆ ಅಗತ್ಯವಿರುವ ಎಲ್ಲಾ ಕ್ರಮ ಕೈಗೊಳ್ಳುವುದು, ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚಿನ ಸಿಬ್ಬಂದಿ ನಿಯೋಜನೆ, ಅನುದಾನ ಹೆಚ್ಚಳ ಮುಂತಾದ ಶಿಫಾರಸ್ಸುಗಳನ್ನು ಮಾಡಿದ್ದು, ವರದಿಯನ್ನು ಶೀಘ್ರದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ, ಉಡುಪಿ ಜಿಲ್ಲೆಯಲ್ಲಿ ವಸತಿ ನಿಲಯಗಳ ವ್ಯವಸ್ಥೆ ಉತ್ತಮವಾಗಿದೆ, ಹಲವು ವಸತಿ ನಿಲಯಗಳಲ್ಲಿ ಹೂವಿನ ತೋಟ, ತರಕಾರಿ ತೋಟ ಮುಂತಾದ ವಿವಿಧ ಚಟುವಟಿಕೆಗಳನ್ನು ವಿದ್ಯಾರ್ಥಿಗಳಿಂದ ಮಾಡಿಸಲಾಗಿದೆ, ವಸತಿನಿಲಯಗಳಿಗೆ ಅಗತ್ಯ ಮೂಲ ಸೌಕರ್ಯ, ತರಕಾರಿ ದಾಸ್ತಾನು ಮಾಡಲು ಫ್ರಿಡ್ಜ್ಗಳ ವ್ಯವಸ್ಥೆ, ಸಮರ್ಪಕ ಕುಡಿಯುವ ನೀರು, ಹೆಚ್ಚಿನ ಅನುದಾನ ಒದಗಿಸುವ ಕುರಿತಂತೆ ತಾನೂ ಸಹ ಸಂಬಂದಪಟ್ಟ ಇಲಾಖೆಗೆ ಶಿಫಾರಸ್ಸು ಮಾಡಿದ್ದು, ವಾರ್ಡನ್ಗಳು ವಿದ್ಯಾರ್ಥಿಗಳ ಬಗ್ಗೆ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸಿ, ಸಮಸ್ಯೆಗಳಿದ್ದಲ್ಲಿ ಮುಕ್ತವಾಗಿ ತಿಳಿಸಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಮೋಹನ್ ಕುಮಾರ್, ಉಡುಪಿ ತಾಲೂಕು ಶಿಶು ಅಭಿವೃದ್ಧಿ ಅಧಿಕಾರಿ ವೀಣಾ, ಮಹಿಳಾ ಪೊಲೀಸ್ ಠಾಣೆಯ ಎ.ಎಸೈ ಮುಕ್ತಾಬಾಯಿ ಉಪಸ್ಥಿತರಿದ್ದರು.
ಜಿಲ್ಲೆಯ ಚಲನಚಿತ್ರ ಮಂದಿರಗಳಲ್ಲಿ ಬಾಲ್ಯ ವಿವಾಹ ನಿಷೇಧ ಕುರಿತ “ಸಂದಿಗ್ಧ” ಚಲನಚಿತ್ರ ಪ್ರದರ್ಶಿಸಿದ ಚಿತ್ರಮಂದಿರಗಳ ಮಾಲೀಕರನ್ನು ಸನ್ಮಾನಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಗ್ರೇಸಿ ಗೋನ್ಸಾಲ್ವೀಸ್ ಸ್ವಾಗತಿಸಿದರು