ಉಡುಪಿ: ಕಾಂಟ್ರಾಕ್ಟ್ ಫಾರ್ಮಿಂಗ್ ನಲ್ಲಿ ರೈತರ ಸಹಮತವಿಲ್ಲದೆ ಖಾಸಗಿ ಸಂಸ್ಥೆಗಳು ಬೆಲೆ ನಿಗದಿಪಡಿಸಲು ಆಗಲ್ಲ. ಹಾಗಾಗಿ ಇದು ರೈತರ ಮೇಲೆ ಹೇರಿಕೆ ಆಗುವುದಿಲ್ಲ. ಇದರಲ್ಲಿ ರೈತರಿಗೆ ಮುಕ್ತವಾದ ನಿರ್ಧಾರ ಕೈಗೊಳ್ಳಲು ಅವಕಾಶವಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಕಾಂಟ್ರಾಕ್ಟ್ ಫಾರ್ಮಿಂಗ್ನಲ್ಲಿ ಖಾಸಗಿ ಸಂಸ್ಥೆಗಳು ರೈತನ ಮೇಲೆ ಒತ್ತಡ ಹೇರುತ್ತದೆ ಎಂಬ ಆರೋಪಕ್ಕೆ ಉತ್ತರಿಸಿದರು.
ರೈತರ ರಕ್ಷಣೆ ಹಾಗೂ ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಗಳಿಗೆ ತಿದ್ದುಪಡಿ ತಂದಿದೆ. ಇದರಿಂದ ಯಾವುದೇ ಕಾರಣಕ್ಕೂ ಕೃಷಿಕರಿಗೆ ಅನ್ಯಾಯವಾಗುವುದಿಲ್ಲ ಎಂದರು.
ಶಾಲಾ-ಕಾಲೇಜಗಳ ಆರಂಭಕ್ಕೆ ಧಾವಂತ ಬೇಡ:
ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದೆ. ಹೀಗಾಗಿ ಮಕ್ಕಳು, ಶಿಕ್ಷಕರ ಆರೋಗ್ಯ ದೃಷ್ಟಿಯಿಂದ ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ಶಾಲಾ ಕಾಲೇಜುಗಳನ್ನು ಆರಂಭಿಸದಿರುವುದು ಉತ್ತಮ ಎಂದು ಶೋಭಾ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಟ್ಟಾರು ರತ್ನಾಕರ ಹೆಗ್ಡೆ, ರೈತ ಮೋರ್ಚಾ ಅಧ್ಯಕ್ಷ ಪ್ರವೀಣ್ ಗುರ್ಮೆ, ನಗರಸಭಾ ಸದಸ್ಯ ಗಿರೀಶ್ ಅಂಚನ್ ಇದ್ದರು.