–ಮಂಜುಳಾ ಜಿ
“ಅಕ್ಟೋಬರ್ 10” ವಿಶ್ವವ್ಯಾಪಿ “ಮಾನಸಿಕ ಆರೋಗ್ಯ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತಿದೆ, ಮಾನಸಿಕ ಆರೋಗ್ಯದ ಅರಿವು ನೀಡುವ ಕಾರ್ಯ ನಡೆಯುತ್ತಿದೆ ಹಲವು ವರ್ಷಗಳಿಂದ. ನಮ್ಮಲ್ಲಿ ದೈಹಿಕ ಆರೋಗ್ಯದ ಬಗ್ಗೆ ಇರುವಷ್ಟು ಕಾಳಜಿ, ಅರಿವು ಮಾನಸಿಕ ಆರೋಗ್ಯದ ಬಗ್ಗೆ ಇಲ್ಲದೆ ಇರುವುದರಿಂದ ಹಾಗೂ ನಮ್ಮ ಇತ್ತೀಚಿನ ದಿನಮಾನಗಳಲ್ಲಿ ಹುಟ್ಟಿಕೊಳ್ಳುತ್ತಿರುವ ಕೆಲವು ಸಮಸ್ಯೆಗಳು ಮಾನಸಿಕ ಆರೋಗ್ಯದ ಕುರಿತು ಜಾಸ್ತಿ ಗಮನ ನೀಡುವಂತೆ ಮಾಡಿದೆ.
ನನ್ನ ವೃತ್ತಿಜೀವನದ ಅನುಭವದ ಮೇಲೆ ಒಂದು ಅನುಭವವನ್ನು ಹಂಚಿಕೊಳ್ಳುತ್ತೇನೆ. ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ಮೂಢನಂಬಿಕೆಗಳು ಬಲವಾಗಿರುತ್ತವೆ, ಕೆಲವೊಮ್ಮೆ ಅವುಗಳನ್ನು ಅಲ್ಲಗೆಳೆಯುವುದು ಸಹ ಅಸಾಧ್ಯ!! ಅನ್ನುವಷ್ಟು ಬಲವಾಗಿರುತ್ತದೆ.
ಎಷ್ಟೋ ಸಲ ಆಸ್ಪತ್ರೆಗೆ ಹೊಸ ಪೇಷಂಟ್ ಗಳನ್ನು ಕರೆತರುವಾಗ ಪೇಷಂಟ್ ನ ಸಂಬಂಧಿಕರು ಕೈಯಲ್ಲಿ ಒಂದು ಚೀಟಿಯನ್ನು ಹಿಡಿದುಕೊಂಡು ಬರುತ್ತಾರೆ, ವಿಶೇಷವೆಂದರೆ ಇತ್ತೀಚಿನ ದಿನಗಳಲ್ಲಿ ಧಾರ್ಮಿಕ ವ್ಯಕ್ತಿಗಳು ಅಂದರೆ ಅರ್ಚಕರು, ಪೂಜಾರಿಗಳು, ಜ್ಯೋತಿಷಿಗಳು ಖುದ್ದಾಗಿ ತಾವೇ ತಮ್ಮಲ್ಲಿಗೆ ಬಂದ ವ್ಯಕ್ತಿಗೆ ಯಾವುದೇ ದೆವ್ವ ಅಥವಾ ದೈವಗಳ ಕಾಟ ಇರುವುದಿಲ್ಲ!! ಯಾವುದೋ ಮನಸ್ಸಿಗೆ ಸಂಬಂಧಪಟ್ಟ ಸಮಸ್ಯೆಯಿಂದ ಬಳಲುತ್ತಿರಬಹುದು? !!ಎಂದು ಪೇಷಂಟ್ ನ ವರ್ತನೆ ರೀತಿಯನ್ನು ಬರೆದು ಕಳುಹಿಸಿರುತ್ತಾರೆ. ಇಂತಹ ಅನುಭವಗಳು ನನ್ನ ವೃತ್ತಿ ಜೀವನದಲ್ಲಿ ಕಂಡಿದ್ದೇನೆ.
ಈ ನಿಟ್ಟಿನಲ್ಲಿ ಸ್ವಲ್ಪಮಟ್ಟಿಗೆ ಅರಿವಿರುವುದು ನಿಜಕ್ಕೂ ಸಂತೋಷದ ವಿಷಯ. ಸಾಮಾನ್ಯವಾಗಿ ವ್ಯಕ್ತಿಯೊಬ್ಬ ಇದ್ದಕ್ಕಿದ್ದ ಹಾಗೆ ವಿಚಿತ್ರವಾಗಿ ವರ್ತಿಸುವುದು!, ಮೈಮೇಲೆ ಬೇರೆಯವರು ಪ್ರವೇಶಿಸಿದಂತೆ ವರ್ತಿಸುವುದು ಉದಾಹರಣೆಗೆ ದೆವ್ವ ಅಥವಾ ದೈವ ಮೈಮೇಲೆ ಬಂದಂತೆ ಮಾಡುವುದು. ನಮ್ಮ ನಂಬಿಕೆಗಳ ಹೊರತಾಗಿಯೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಈ ತೆರನಾದ ಲಕ್ಷಣಗಳಿರುತ್ತವೆ. ಅತಿ ಒತ್ತಡ, ಹೇಳಿಕೊಳ್ಳಲಾಗದಂತೆ ನೋವು, ಇತ್ತೀಚಿಗೆ ಘಟಿಸಿದ ಜೀವನದ ಕಹಿ ಘಟನೆಗಳು ವ್ಯಕ್ತಿಯನ್ನು ಮಾನಸಿಕವಾಗಿ ದುರ್ಬಲಗೊಳಿಸಿ ಅವರಲ್ಲಿ ಈ ತೆರನಾದ ಲಕ್ಷಣಗಳನ್ನು ತೋರುವಂತೆ ಮಾಡುತ್ತದೆ. ಇದನ್ನು “Disassociative disorder “ಎಂದು ಕರೆಯುತ್ತಾರೆ.
ಇದೇ ತರಹ ಮನೋದೌರ್ಬಲ್ಯದಿಂದ ಹಲವಾರು ಲಕ್ಷಣಗಳನ್ನು ಒಬ್ಬ ವ್ಯಕ್ತಿ ತೋರಿಸುತ್ತಿದ್ದರು!! ಮುಂಚಿತವಾಗಿ ನಾವು ವೈದ್ಯಕೀಯ ನೆರವನ್ನು ಪಡೆಯದೆ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತವೆ.
ಸಾಮಾನ್ಯವಾಗಿ ನಾವು ಮಾನಸಿಕ ಆರೋಗ್ಯದ ದತ್ತ ನಿರ್ಲಕ್ಷ ಮಾಡುತ್ತೇವೆ, ಅಂತಹ ನಿರ್ಲಕ್ಷ ಸಲ್ಲದು. ಮಾನಸಿಕ ಕಾಯಿಲೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು, ಆಪ್ತಸಮಾಲೋಚನೆ ಪಡೆಯುವುದು ಇವೆಲ್ಲವೂ ತಪ್ಪು ಮತ್ತು ಕೀಳರಿಮೆ ಎಂಬ ಗ್ರಹಿಕೆ ನಮ್ಮಲ್ಲಿದೆ.
ಹೇಗೆ ದೈಹಿಕ ಕಾಯಿಲೆಗಳಿಗೆ ಚಿಕಿತ್ಸೆಗಳಿವೆ ಹಾಗೆಯೇ ಮಾನಸಿಕ ಕಾಯಿಲೆಗಳಿಗೆ ಸಂಬಂಧಪಟ್ಟಂತೆ ಅದರದೇ ಆದಂತಹ ಚಿಕಿತ್ಸಾಕ್ರಮಗಳಿಗೆ. ದೇಹ ನಮ್ಮದು ಎಂದ ಮೇಲೆ ನಾವು ಮನುಷ್ಯ ಅಂದಮೇಲೆ ಖಂಡಿತ ದೇಹದಂತೆ ಮನಸ್ಸಿಗೂ ಸಮಸ್ಯೆಗಳು ಬರುವುದು ಸಹಜ. ದೇಹದ ಕಡೆ ತೋರುವ ಗಮನ ಮನಸ್ಸಿನ ಕಡೆಗೂ ನೀಡಬೇಕಾದದ್ದು ಅನಿವಾರ್ಯ.
ಮಾನಸಿಕ ಆರೋಗ್ಯಕ್ಕೆ ಸಂಬಂಧಪಟ್ಟ ಚಿಕಿತ್ಸೆ ಬಗ್ಗೆ ಕೆಲವೊಮ್ಮೆ ನಮ್ಮನ್ನು ಬೇರೆಯವರು ಸಮರ್ಪಕ ಮಾಹಿತಿ ಇಲ್ಲದೆ ತಪ್ಪು ತಿಳುವಳಿಕೆಯಿಂದ ಸೂಕ್ತ ಸಮಯಕ್ಕೆ ಚಿಕಿತ್ಸೆ ಪಡೆಯದಂತೆ ನಮ್ಮ ದಿಕ್ಕು ತಪ್ಪಿಸಬಹುದು. ನಾನು, ನಮ್ಮವರು, ನಮ್ಮ ಜವಾಬ್ದಾರಿ ಎಂದಮೇಲೆ ಖಂಡಿತ ನನಗೆ ಮತ್ತು ನಮ್ಮವರಿಗೆ ಸಂಬಂಧಪಟ್ಟ ನಿರ್ಧಾರಗಳನ್ನು ನಾವೇ ತೆಗೆದುಕೊಳ್ಳಬೇಕು.
ಸಮಾಜದಲ್ಲಿ ಮಾನಸಿಕ ಸಮಸ್ಯೆ ಹಾಗೂ ಮನೋದೌರ್ಬಲ್ಯದಿಂದ ಬಳಲುತ್ತಿರುವವರ ಬಗ್ಗೆ ತಾತ್ಸಾರ ಭಾವ ಇರುವುದರಿಂದ ದೇಹ ಸಂಬಂಧಪಟ್ಟ ಕಾಯಿಲೆಗಳಾದ ಬಿಪಿ, ಶುಗರ್, ಹೃದಯ, ಕಿಡ್ನಿ ಮುಂತಾದ ದೈಹಿಕ ಕಾಯಿಲೆಗೆ ಚಿಕಿತ್ಸೆಗೆ ಹೋಗುವಷ್ಟು ವೇಗವಾಗಿ ಖಿನ್ನತೆ, ಆತಂಕ, ಮದ್ಯವ್ಯಸನ, ಗೀಳುರೋಗ, ಒತ್ತಡ, ವ್ಯಕ್ತಿತ್ವ ಸಮಸ್ಯೆ, ಭಾವನಾತ್ಮಕ ಸಮಸ್ಯೆ, ಮಕ್ಕಳು ಮತ್ತು ವಯಸ್ಕರಲ್ಲಿ ಕಾಣಿಸುವಂಥ ಮಾನಸಿಕ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದಿಲ್ಲ.
ಸೂಕ್ತ ಸಮಯದಲ್ಲಿ ಮನೋ ವೈದ್ಯಕೀಯ ನೆರವನ್ನು ಪಡೆಯುವುದರಿಂದ ಸಮಸ್ಯೆಗಳನ್ನು ಹತೋಟಿಗೆ ತರಬಹುದು. ಇನ್ನುಳಿದಂತೆ ಔಷಧಿ ಉಪಚಾರದ ಬಗ್ಗೆ ಕೆಲವೊಂದು ತಪ್ಪು ಗ್ರಹಿಕೆಗಳಿವೆ, ಖಂಡಿತ ನೇರವಾಗಿ ಸಂಪರ್ಕಿಸಿ ಮಾಹಿತಿಯನ್ನು ಪಡೆದು ಸೂಕ್ತವಾಗಿ ಸಮಸ್ಯೆ ಇಂದ ಬಳಲುತ್ತಿರುವವರಿಗೆ ನೆರವಾಗುವುದು ನಮ್ಮೆಲ್ಲರ ಸಾಮಾಜಿಕ ಜವಾಬ್ದಾರಿಯೂ ಹೌದು.
ನಮ್ಮ ಬದುಕನ್ನು ಪ್ರೀತಿಸುವ, ನಮ್ಮವರ ಬದುಕನ್ನು ಪ್ರೀತಿಸುವ ಹಾಗಾಗಿ ನಮ್ಮ ದೇಹ ಮನಸ್ಸು ಎರಡು ಒಂದೇ ನಾಣ್ಯದ ಮುಖಗಳಿದ್ದಂತೆ ಎರಡನ್ನು ಸ್ವೀಕರಿಸುವ, ಎರಡಕ್ಕೂ ಸೂಕ್ತವಾದ ಉಪಚಾರವನ್ನು ಮಾಡೋಣ. ಮಾನಸಿಕ ಆರೋಗ್ಯದ ಕುರಿತು ಹೆಚ್ಚು ಹೆಚ್ಚು ತಿಳಿದುಕೊಳ್ಳೋಣ, ಜಾಗೃತರಾಗೋಣ, ಕೀಳರಿಮೆ, ತಪ್ಪು ಗ್ರಹಿಕೆ ಎಲ್ಲದರಿಂದ ಹೊರಬಂದು ಸ್ವಸ್ಥ ರಾಗೋಣ. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡೋಣ.
ಲೇಖನ: ಮಂಜುಳಾ ಜಿ
ಉಪನ್ಯಾಸಕರು
(ಆಪ್ತಸಮಾಲೋಚಕರಾಗಿ ಕಾರ್ಯನಿರ್ವಹಿಸಿದವರು).