ಉಡುಪಿ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಕೃಷಿ ಮಸೂದೆ, ಕಾರ್ಮಿಕ ಕಾಯ್ದೆಯನ್ನು ವಿರೋಧಿ ನಡೆಸಲಾಗುತ್ತಿರುವ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಉಡುಪಿ ಸಿಟಿ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿಯಲ್ಲೂ ಬಂದ್ ವಿವಿಧ ಸಂಘಟನೆಗಳು ಕರೆಕೊಟ್ಟಿವೆ. ಆದರೆ ಎಂದಿನಂತೆ ಬಸ್ ಸಂಚಾರ ಆರಂಭವಾಗಿದೆ. ಹಾಗಾಗಿ ಬಂದ್ ಗೆ ಕರೆ ನೀಡಿರುವ ಪ್ರತಿಭಟಾನಾಕಾರರು ಬಸ್ ಚಾಲಕರು ಹಾಗೂ ನಿರ್ವಾಹಕರಲ್ಲಿ ಬಸ್ ಬಿಡದಂತೆ ಮನವಿ ಮಾಡಿದರು.
ಇದಕ್ಕೆ ಒಪ್ಪದಿದ್ದಾಗ ಬಸ್ ಚಾಲಕರು ಹಾಗೂ ಪ್ರತಿಭಟನಾಕಾರರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ಪ್ರತಿಭಟನಾ ನಿರತರು ಸಿಟಿ ಬಸ್ ನಿಲ್ದಾಣದಲ್ಲಿ ರಸ್ತೆ ತಡೆ ನಡೆಸಲು ಮುಂದಾದರು. ಈ ವೇಳೆ ಒಟ್ಟು 21 ಮಂದಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಬಂಧಿತರಲ್ಲಿ ಸಿಪಿಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕರವೇ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ದಸಂಸ ಮುಖಂಡ ಸುಂದರ್ ಮಾಸ್ಟರ್, ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ಯತೀಶ್ ಕರ್ಕೇರ, ಆರ್.ಕೆ.ರಮೇಶ್, ವೆಲ್ಫೇರ್ ಪಾರ್ಟಿಯ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ, ಅನ್ನದಾತ ಆಟೋ ಯೂನಿಯನ್ ನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು, ವಿವಿಧ ಸಂಘಟನೆಗಳ ಮುಖಂಡರಾದ ಸಾಯಿರಾಜ್ ಕೋಟ್ಯಾನ್, ಧನುಷ್ ಶೆಟ್ಟಿ, ಅಬ್ದುಲ್ ರಹ್ಮಾನ್, ಹಮೀದ್ ಸೇರಿದ್ದಾರೆ.
ನಗರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸರ್ವಿಸ್ ಹಾಗೂ ಸಿಟಿ ಬಸ್ ಗಳ ಸಂಚಾರ ಎಂದಿನಂತೆ ಮುಂದುವರಿದಿದೆ.