ಮಣಿಪಾಲ ಸುಲಿಗೆ ಪ್ರಕರಣ: ಕಾಪು ಮೂಲದ ಆರೋಪಿಯ ಬಂಧನ

ಉಡುಪಿ: ಮಣಿಪಾಲ ಮತ್ತು ಉಡುಪಿ ಠಾಣಾ ವ್ಯಾಪ್ತಿಯಲ್ಲಿ ಸೆ.19 ಮುಂಜಾನೆ ನಡೆದ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಇನ್ನೋರ್ವ ಆರೋಪಿಯನ್ನು ಬಂಧಿಸಲು ಕಾರ್ಯ ತಂತ್ರ ರೂಪಿಸಿದ್ದಾರೆ.

ಈ ಬಗ್ಗೆ ಉಡುಪಿ ಎಸ್ಪಿ ಕಚೇರಿಯಲ್ಲಿ ಭಾನುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದರು.

ಮಲ್ಲಾರು ಕೊಂಬಗುಡ್ಡೆಯ ಮೊಹಮ್ಮದ್ ಆಶಿಕ್(19) ಬಂಧಿತ ಆರೋಪಿ.

ಏನಿದು ಪ್ರಕರಣ.?
ಸೆ.19ರಂದು ತಡರಾತ್ರಿ ಮಣಿಪಾಲ ಮತ್ತು ಉಡುಪಿ ಸುತ್ತಮುತ್ತಲಿನ ಭಾಗದಲ್ಲಿ ಬೈಕ್ ನಲ್ಲಿ ಹೋಗುವವರನ್ನು ಅಡ್ಡಗಟ್ಟಿ, ಚೂರಿ ತೋರಿಸಿ ಬೆದರಿಸಿ ಹಣ ದೋಚುತ್ತಿದ್ದರು. ಹಣ ಕೊಡಲು ಒಪ್ಪದಿದ್ದಾಗ ಆರೋಪಿಗಳು ಆಯುಧಗಳಿಂದ ಹಲ್ಲೆ ನಡೆಸಿ ಬೈಕ್ ಸವಾರರಲ್ಲಿದ್ದ ಬೆಲೆ ಬಾಳುವ ವಸ್ತುಗಳನ್ನು ಸುಲಿಗೆ ಮಾಡಿ ಪರಾರಿಯಾಗುತ್ತಿದ್ದರು. ಬೈಕ್ ನಲ್ಲಿ ಬರುವ ಆರೋಪಿಗಳು ಮಣಿಪಾಲ ಠಾಣೆಯ ವ್ಯಾಪ್ತಿಯಲ್ಲಿ ಮೂರು ಕಡೆ ಮತ್ತು ಉಡುಪಿ ಠಾಣೆಯ ವ್ಯಾಪ್ತಿಯ ಒಂದು ಕಡೆ ಇಂತಹ ಕೃತ್ಯವನ್ನು ನಡೆಸಿದ್ದರು.

ಈ ಘಟನೆ ಉಡುಪಿ ಹಾಗೂ ಮಣಿಪಾಲ ಪರಿಸರದಲ್ಲಿ ಸಾಕಷ್ಟು ಭೀತಿ ಹುಟ್ಟಿಸಿತ್ತು. ಹಾಗಾಗಿ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಉಡುಪಿ ವೃತ್ತ ನಿರೀಕ್ಷಕ ಮಂಜುನಾಥ್ ಮತ್ತು ಮಣಿಪಾಲ ಪೊಲೀಸ್ ನಿರೀಕ್ಷಕ ಮಂಜುನಾಥ್ ಗೌಡ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.

ಮತ್ತೆ ಸುಲಿಗೆಗೆ ಯತ್ನಿಸುತ್ತಿರುವಾಗ ಬಂಧನ: ಆರೋಪಿ ಆಶಿಕ್ ಸೆ.26ರಂದು ಮತ್ತೆ ಸುಲಿಗೆ ನಡೆಸಲು ಫೀಲ್ಡ್ ಗೆ ಇಳಿದಿದ್ದ. ಉಡುಪಿ -ಮಣಿಪಾಲ ಪರಿಸರದಲ್ಲಿ ಹೊಂಚು ಹಾಕುತ್ತಿದ್ದ ಈತನನ್ನು ಪೊಲೀಸರು ಮಣಿಪಾಲದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಯಮಹಾ ಬೈಕ್, ಸ್ಕ್ರೂಡ್ರೈವರ್, ಒಂದು ಸುಲಿಗೆ ಮಾಡಿದ ಮೊಬೈಲ್‌ನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೆ ಈತ ಬೆಂಗಳೂರಿನಲ್ಲಿ ಕಳ್ಳತನ ಮಾಡಿಕೊಂಡು ಬಂದಿದ್ದ ಎರಡು ಲಕ್ಷ ರೂ. ವೌಲ್ಯದ ಬುಲೆಟ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆರೋಪಿಯನ್ನು ಲ ವಿಡಿಯೋ ಕಾನ್ಫೆರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15ವದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಎಎಸ್ಪಿ ಕುಮಾರಚಂದ್ರ, ಪೊಲೀಸ್ ನಿರೀಕ್ಷಕರಾದ ಮಂಜುನಾಥ್, ಮಂಜುನಾಥ್ ಗೌಡ, ಮಣಿಪಾಲ ಎಸ್ಸೈ ರಾಜಶೇಖರ್ ಉಪಸ್ಥಿತರಿದ್ದರು.

ಕೊಲೆ ಯತ್ನ ಪ್ರಕರಣದಲ್ಲಿ ಭಾಗಿ:
ಆರೋಪಿ ಆಶೀಕ್ ಸುಲಿಗೆಗಾಗಿ ಪಡ್ಡೆ ಹುಡುಗರ ಗ್ಯಾಂಗ್ ಒಂದನ್ನು ಕಟ್ಟಿಕೊಂಡಿದ್ದನು. ಈತ ಸುಲಿಗೆ ಪ್ರಕರಣ ಮಾತ್ರವಲ್ಲದೆ ಸೆ.22ರಂದು ಕಾಪು ಬಳಿಯ ಮಲ್ಲಾರಿನಲ್ಲಿ ನಡೆದ ಕೊಲೆ ಯತ್ನ ಪ್ರಕರಣದಲ್ಲಿಯೂ ಭಾಗಿಯಾಗಿದ್ದ. ಮಲ್ಲಾರಿನ ಅಬ್ದುಲ್ ಸತ್ತಾರ್ ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ತಲವಾರಿನಲ್ಲಿ ದಾಳಿ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಉಳಿದ ಆರೋಪಿಗಳನ್ನು ನಾವುಂದ ಬಡಾಕೆರೆಯ ಮುಹಮ್ಮದ್ ಆಸೀಫ್ ಯಾನೆ ರಮೀಝ್(30), ನಾವುಂದ ಎಂಜಿ ರೋಡ್‌ನ ಮಿಸ್ವಾ(22), ಇಜಾಝ್ ಅಹ್ಮದ್(19), ಮಲ್ಪೆ ಜೋಕಟ್ಟೆಯ ದಾವೂದ್ ಇಬ್ರಾಹಿಂ ಯಾನೆ ಇಬ್ಬಾ (26) ಎಂದು ಗುರುತಿಸಲಾಗಿದೆ.

ಈ ಪ್ರಕರಣದಲ್ಲಿ ಆಶಿಕ್ ಹೊರತು ಪಡಿಸಿ ಉಳಿದ ಆರೋಪಿಗಳನ್ನು ಸೆ.26 ರಂದು ಉದ್ಯಾವರದ ಜೈಹಿಂದ್ ಜಂಕ್ಷನ್ ಬಳಿ ಪೊಲೀಸರು ಬಂಧಿಸಿದ್ದಾರೆ. ಈ ಎಲ್ಲ ಆರೋಪಿಗಳನ್ನು 15ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರಲ್ಲಿ ಮೂವರು ಗಾಂಜಾ ಸೇವನೆ ಮಾಡುತ್ತಿದ್ದರು ಎನ್ನಲಾಗಿದೆ.