ಉಡುಪಿ: ವರುಣನ ಆರ್ಭಟಕ್ಕೆ ಉಡುಪಿ ಶ್ರೀಕೃಷ್ಣಮಠದ ಪಾರ್ಕಿಂಗ್ ಆವರಣ ಸಂಪೂರ್ಣ ಜಲಾವೃತಗೊಂಡಿದೆ. ರಾಜಾಂಗಣಕ್ಕೆ ಮಳೆ ನೀರು ನುಗ್ಗಿದೆ.
ನಿನ್ನೆ ರಾತ್ರಿ ಸುರಿದ ಮಳೆಗೆ ಇಂದ್ರಾಣಿ ಹೊಳೆ ಹುಕ್ಕಿ ಹರಿದಿದ್ದು, ಇದರ ಪರಿಣಾಮ ಶ್ರೀಕೃಷ್ಣಮಠದ ಸುತ್ತಮುತ್ತಲಿನ ತಗ್ಗುಪ್ರದೇಶಗಳು ಸಂಪೂರ್ಣ ಮುಳುಗಡೆಯಾಗಿವೆ. ಬೈಲಕೆರೆ, ರಾಜಾಂಗಣ ಪಾರ್ಕಿಂಗ್ ಪ್ರದೇಶ, ಕಲ್ಸಂಕ, ಬಡಗುಪೇಟೆ ರಸ್ತೆ, ಕೃಷ್ಣಮಠಕ್ಕೆ ಹೋಗುವ ಪ್ರವೇಶ ದ್ವಾರ ಮಳೆ ನೀರಿಗೆ ಜಲಾವೃತಗೊಂಡಿದೆ.
ಪರ್ಯಾಯ ಅದಮಾರು ಮಠದ ಈಶಪ್ರಿಯ ಶ್ರೀಪಾದರು ಮಳೆ ಸೃಷ್ಟಿಸಿದ ಅವಾಂತರವನ್ನು ವೀಕ್ಷಿಸಿದರು.
ತೆಪ್ಪದ ಮೂಲಕ ರಕ್ಷಣೆ:
ಪರ್ಯಾಯ ಶ್ರೀಗಳು ನೆರೆಯಲ್ಲಿ ಸಿಲುಕಿದ ಜನರನ್ನು ರಕ್ಷಿಸಲು ತೆಪ್ಪದ ವ್ಯವಸ್ಥೆ ಮಾಡುವಂತೆ ಉದ್ಯಮಿ ಯಶ್ ಪಾಲ್ ಸುವರ್ಣ ಬಳಿ ಸಹಾಯ ಕೋರಿದರು. ಅದರಂತೆ ಅವರು ತೆಪ್ಪದ ವ್ಯವಸ್ಥೆ ಮಾಡಿದ್ದಾರೆ. ತೆಪ್ಪದ ಸಹಾಯದಿಂದ ಹರೀಶ್ ಬೈಲಕೆರೆ, ನಗರಸಭಾ ಸದಸ್ಯ ಗಿರೀಶ್ ಕಾಂಚನ್ ಹಾಗೂ ಸ್ಥಳೀಯರು ಸೇರಿ ನೆರೆಯಲ್ಲಿ ಸಿಲುಕಿದ ಬೈಲಕೆರೆ ಸಮೀಪದ ನಿವಾಸಿಗರನ್ನು ರಕ್ಷಣೆ ಮಾಡಿದ್ದಾರೆ.
ನೆರೆಯಿಂದ ಸಂತ್ರಸ್ತರಾದ 200 ಜನಕ್ಕೆ ಮಠದ ವತಿಯಿಂದ ಉಪಹಾರ ಮತ್ತು ಮಧ್ಯಾಹ್ನದ ಪ್ರಸಾದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೆ ನೆರೆಯಿಂದ ಸಂತ್ರಸ್ತರಾದವರಿಗೆ ವಸತಿ ವ್ಯವಸ್ಥೆ ಅವಶ್ಯವಿದ್ದಲ್ಲಿ ಕೃಷ್ಣಮಠದಲ್ಲಿ ಒದಗಿಸಲಾಗುವುದು ಎಂದು ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ತಿಳಿಸಿದ್ದಾರೆ.