ನಿಟ್ಟೂರು ಪ್ರೌಢಶಾಲೆಯ 15 ಹಳೆವಿದ್ಯಾರ್ಥಿ ಶಿಕ್ಷಕರಿಗೆ ‘ಸುವರ್ಣ ಶಿಕ್ಷಕ ಪುರಸ್ಕಾರ’ ಪ್ರದಾನ

ಉಡುಪಿ: ನಿಟ್ಟೂರು ಪ್ರೌಢ ಶಾಲೆಯ ‘ಸುವರ್ಣ ಪರ್ವ’ ಆಚರಣೆಯ ಅಂಗವಾಗಿ 15 ಮಂದಿ ಶಾಲಾ ಹಳೆವಿದ್ಯಾರ್ಥಿ ಶಿಕ್ಷಕರುಗಳನ್ನು ‘ಸುವರ್ಣ ಶಿಕ್ಷಕ ಪುರಸ್ಕಾರ’ದೊಂದಿಗೆ ಸನ್ಮಾನಿಸಲಾಯಿತು.

ಭಾನುವಾರ ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಕೆ. ರಘುಪತಿ ಭಟ್ ಅವರು ಶಿಕ್ಷಕರಿಗೆ ಪುರಸ್ಕಾರ ಪ್ರದಾನ ಮಾಡಿ ಗೌರವಿಸಿದರು.

ಎಂ.ಜಿ.ಎಂ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಎಲ್. ಸಾಮಗ ಮಾತನಾಡಿ, ಬಾಲ್ಯದಲ್ಲಿ ಕಳೆದ ಶಾಲಾ ದಿನಗಳನ್ನು ಮೆಲುಕು ಹಾಕುವಾಗ ದೊರೆಯುವ ಆನಂದಕ್ಕೆ ಸರಿಸಮಾನವಾದುದು ಬೇರೆ ಇಲ್ಲ. ಶಿಕ್ಷಕ ವೃತ್ತಿಯನ್ನು ಸ್ವೀಕರಿಸಿದ ಹಳೆವಿದ್ಯಾರ್ಥಿಗಳನ್ನು ಕಲಿತ ಶಾಲೆಯಲ್ಲಿಯೇ ಸಮ್ಮಾನಿಸುವುದು ವಿಶಿಷ್ಟವಾದ ಅನುಭವ ಎಂದರು.

ಇದೇ ಸಂದರ್ಭದಲ್ಲಿ ಲೆಕ್ಕಪರಿಶೋಧಕ ಸಂಘ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಿಯುಕ್ತಿಗೊಂಡ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಪ್ರದೀಪ್ ಜೋಗಿ ಅವರನ್ನು ಅಭಿನಂದಿಸಲಾಯಿತು.

ಈವರೆಗೆ 124 ಕೋವಿಡ್ ಮೃತದೇಹಗಳ ಅಂತ್ಯಸಂಸ್ಕಾರ ಕಾರ್ಯದಲ್ಲಿ ತೊಡಗಿಸಿಕೊಂಡ ‘ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಹಳೆವಿದ್ಯಾರ್ಥಿ ನಾಗಾರ್ಜುನ ಪೂಜಾರಿ ಅವರನ್ನು ಹತ್ತುಸಾವಿರ ನಿಧಿಯೊಂದಿಗೆ ಸಮ್ಮಾನಿಸಲಾಯಿತು.
ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಗ್ರೀಷ್ಮಾ ಅವರನ್ನು ಐದು ಸಾವಿರ ನಗದು ಪುರಸ್ಕಾರದೊಂದಿಗೆ ಸಮ್ಮಾನಿಸಲಾಯಿತು.

ಸಮಾರಂಭದಲ್ಲಿ ನಿವೃತ್ತ ಮುಖ್ಯೋಪಾಧ್ಯಾಯರಾದ ಪಿ. ವೇಣುಗೋಪಾಲ ಆಚಾರ್, ಎಸ್.ವಿ ಭಟ್, ಕೆ.ಸುಬ್ರಹ್ಮಣ್ಯ ಭಟ್ ಹಾಗೂ ಭಾಸ್ಕರ ಡಿ. ಸುವರ್ಣ, ಶಾಲಾ ಅಭಿಮಾನಿ ವಿಜಯ್ ಕುಮಾರ್ ಮುದ್ರಾಡಿ, ಹಳೆವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ದಿನೇಶ್ ಪಿ. ಪೂಜಾರಿ ಉಪಸ್ಥಿತರಿದ್ದರು.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಸ್ವಾಗತಿಸಿದರು. ಎಚ್.ಎನ್ ಶೃಂಗೇಶ್ವರ ಶಿಕ್ಷಕರ ಪರಿಚಯ ಮಾಡಿದರು. ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹಳೆವಿದ್ಯಾರ್ಥಿ ಶಶಿಪ್ರಭಾ ಕಾರಂತ್ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶಿಕ್ಷಕಿ ಅನಸೂಯ ವಂದಿಸಿದರು.