ಉಡುಪಿ: ಶನಿವಾರ ಅಸ್ತಂಗತರಾದ ಎಡನೀರು ಮಠಾಧೀಶ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳಿಗೆ ಉಡುಪಿ ಯಕ್ಷಗಾನ ಕಲಾರಂಗ ಸಂತಾಪ ಸೂಚಿಸಿದೆ.
ಶ್ರೀಗಳು ಮಠದ ಹೆಸರಲ್ಲೇ ಮೇಳವನ್ನು ಕಟ್ಟಿ ಹಲವು ವರ್ಷ ಮನ್ನಡೆಸಿದ್ದಲ್ಲದೆ ಸ್ವತಃ ಭಾಗವತಿಕೆ ಮೂಲಕ ಯಕ್ಷಗಾನಕ್ಕೆ ವಿಶೇಷ ಪಾವಿತ್ರ್ಯವನ್ನು ತಂದೊದಗಿಸಿದ್ದರು. ತನ್ನ ಮಠದ ಸದಸ್ಯರೆಂಬಂತೆ ನೂರಾರು ಕಲಾವಿದರನ್ನು ಪ್ರೀತಿ ವಿಶ್ವಾಸದಿಂದ ಕಂಡು ಪೋಷಿಸಿದರು. ಶ್ರೀಗಳು ಕಲೆ ಹಾಗೂ ಕಲಾವಿದರ ಶ್ರೇಯಸ್ಸಿಗೆ ನೀಡಿದ ಕೊಡುಗೆಗಾಗಿ ಶ್ರೀ ಭಾರತೀಕಲಾಸದನ ಸಂಸ್ಥೆಗೆ 2007ರಲ್ಲಿ ಶ್ರೀ ವಿಶ್ವೇಶತೀರ್ಥ ಪ್ರಶಸ್ತಿಯನ್ನು ಯಕ್ಷಗಾನ ಕಲಾರಂಗ ಸಂಸ್ಥೆ ನೀಡಿ ಗೌರವಿಸಿತ್ತು.
ಸಂಸ್ಥೆಯ ಕಾರ್ಯ ಚಟುವಟಿಕೆಗಳ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಶ್ರೀ ಪಾದರು ಕಳೆದ ವರ್ಷ ನಮ್ಮ ಕಚೇರಿಗೆ ಆಗಮಿಸಿ ಕಾರ್ಯಕರ್ತರನ್ನು ಹಾರೈಸಿದ್ದರು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ.ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.












