ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಎಂ.ಎಸ್. ಧೋನಿ ವಿದಾಯ ಘೋಷಿಸಿದ್ದಾರೆ. ಆ ಮೂಲಕ 16 ವರ್ಷದ ಕ್ರಿಕೆಟ್ ಬದುಕಿಗೆ ಪೂರ್ಣ ವಿರಾಮ ಹಾಕಿದ್ದಾರೆ.
ಧೋನಿ 2004 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದರು. ಈವರೆಗೆ 350 ಏಕದಿನ ಪಂದ್ಯ, 90 ಟೆಸ್ಟ್ ಪಂದ್ಯ, 98 ಟಿ ಟ್ವೆಂಟಿ ಪಂದ್ಯ ಆಡಿದ್ದಾರೆ.
ಅವರು ನಾಯಕನಾಗಿ 2007ರಲ್ಲಿ ಚೊಂಚಲ ಟಿ ಟ್ವೆಂಟಿ ವಿಶ್ವಕಪ್, 2011ರ ವಿಶ್ವಕಪ್ ಹಾಗೂ 2013ರಲ್ಲಿ ಚಾಂಪಿಯನ್ ಟ್ರೋಫಿಯನ್ನು ಭಾರತಕ್ಕೆ ಗೆಲ್ಲಿಸಿಕೊಟ್ಟಿದ್ದಾರೆ.
2019ರ ವಿಶ್ವಕಪ್ ನಂತರ ಧೋನಿ ಕ್ರಿಕೆಟ್ ಗೆ ನಿವೃತ್ತಿ ಘೋಷಣೆ ಮಾಡುತ್ತಾರೆಂಬ ವದಂತಿ ಹಬ್ಬಿತ್ತು. ವಿಶ್ವಕಪ್ ನಂತರ ಯಾವುದೇ ಅಂತರರಾಷ್ಟ್ರೀಯ ಪಂದ್ಯಕ್ಕೂ ಧೋನಿ ಆಯ್ಕೆ ಆಗಿರಲಿಲ್ಲ. ಆದರೆ ಇದೀಗ ಐಪಿಎಲ್ ಗೂ ಮುನ್ನವೇ ನಿವೃತ್ತಿ ಘೋಷಣೆ ಮಾಡಿದ್ದಾರೆ. ಧೋನಿ ಅಂತರರಾಷ್ಟ್ರೀಯ ಕ್ರಿಕೆಟ್ ವಿದಾಯ ಘೋಷಣೆ ಮಾಡಿದರೂ ಐಪಿಎಲ್ ನಲ್ಲಿ ಮುಂದುವರಿಯಲಿದ್ದಾರೆ. ಧೋನಿ ನಿವೃತ್ತಿ ಅವರ ಅಭಿಮಾನಿಗಳಿಗೆ ಬೇಸರ ಉಂಟು ಮಾಡಿದರೂ, ಅವರು ಐಪಿಎಲ್ ನಲ್ಲಿ ಮುಂದುವರಿಯುವುದು ಕೊಂಚ ಖುಷಿ ನೀಡಲಿದೆ.