ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಇಂದು ನಡೆದ ದೇಶದ 74ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ದೇಶದ ಜನತೆಯನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಭಾಷಣದ ಮುಖಾಂಶಗಳು ಈ ಕೆಳಗಿನಂತಿದೆ:
* ಭಾರತ ಯುವ ಶಕ್ತಿಯಿಂದ ತುಂಬಿದ ದೇಶ, ‘ಆತ್ಮ ನಿರ್ಭರ’ಕ್ಕೆ ಆತ್ಮವಿಶ್ವಾಸ ಹೊಂದಿರುವ ದೇಶ ಭಾರತ.
*ಆತ್ಮ ನಿರ್ಭರ ಭಾರತ’ ಕನಸನ್ನು ಭಾರತ ಸಾಕಾರಗೊಳಿಸುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತೀಯರ ಸಾಮರ್ಥ್ಯ ಸಾಮರ್ಥ್ಯದ ಬಗ್ಗೆ ನನಗೆ ವಿಶ್ವಾಸವಿದೆ
*ಕೃಷಿ ಕ್ಷೇತ್ರದಲ್ಲಿ ನಾವು ‘ಆತ್ಮ ನಿರ್ಭರ’ರಾಗುತ್ತಿದ್ದೇವೆ. ಕೃಷಿ ಕ್ಷೇತ್ರಗಳಿಗೆ ಸಂಬಂಧಿಸಿದ ಕಾನೂನುಗಳನ್ನು ಸರಳಗೊಳಿಸಲಾಗಿದೆ
* ಸ್ವತಂತ್ರ ಭಾರತದ ಮನಸ್ಥಿತಿ ‘ವೋಕಲ್ ಫಾರ್ ಲೋಕಲ್ (ಸ್ಥಳೀಯ ಉತ್ಪನ್ನಗಳಿಗೆ ನಾವು ದನಿಯಾಗಬೇಕು)’ ಆಗಿರಬೇಕು. ಸ್ಥಳೀಯ ಉತ್ಪನ್ನಗಳನ್ನು ನಾವು ಇಷ್ಟಪಡಬೇಕು. ನಾವಿದನ್ನು ಮಾಡದಿದ್ದರೆ ಸ್ಥಳೀಯವಾಗಿ ಉತ್ತಮ ಉತ್ಪನ್ನಗಳ ತಯಾರಿಗೆ ಅವಕಾಶ ದೊರೆಯುವುದಿಲ್ಲ, ಪ್ರೋತ್ಸಾಹ ದೊರೆಯುವುದಿಲ್ಲ
* ಕಳೆದ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ಶೇ 18ರ ದಾಖಲೆಯ ಹೆಚ್ಚಳವಾಗಿತ್ತು. ಜಗತ್ತು ಭಾರತದ ಮೇಲೆ ವಿಶ್ವಾಸವಿರಿಸಿದೆ. ನಮ್ಮ ಪ್ರಜಾಪ್ರಭುತ್ವ, ಆರ್ಥಿಕತೆಯ ತಳಹದಿ ಗಟ್ಟಿಗೊಳಿಸುವ ನಿಟ್ಟಿನಲ್ಲಿ ನೀತಿಗಳನ್ನು ರೂಪಿಸಿದ್ದೇವೆ
* ‘ಆತ್ಮ ನಿರ್ಭರ ಭಾರತ’ ಸಾಧಿಸಲು ಕೃಷಿ ಕ್ಷೇತ್ರ, ಕೃಷಿಕರು ‘ಆತ್ಮ ನಿರ್ಭರ’ರಾಗಬೇಕಿದೆ. ಕೃಷಿಕರಿಗೆ ಹೆಚ್ಚು ಮೂಲಸೌಕರ್ಯ ಕಲ್ಪಿಸಲು ₹1 ಲಕ್ಷ ಕೋಟಿ ‘ಕೃಷಿ ಮೂಲಸೌಕರ್ಯ ನಿಧಿ’ ಸ್ಥಾಪಿಸಲಾಗಿದೆ: ಮೋದಿ
* 2014ಕ್ಕೂ ಮೊದಲು ಕೇವಲ 5 ಡಜನ್ ಹಳ್ಳಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕವಿತ್ತು. ಕಳೆದ 5 ವರ್ಷಗಳಲ್ಲಿ 1.5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಒದಗಿಸಲಾಗಿದೆ. ಮುಂದಿನ ಸಾವಿರ ದಿನಗಳಲ್ಲಿ ಎಲ್ಲ ಹಳ್ಳಿಗಳಿಗೆ ದೊರೆಯಲಿದೆ
* ‘ಆತ್ಮ ನಿರ್ಭರ ಭಾರತ’ ಸಾಧಿಸಲು ಶಿಕ್ಷಣ ಬಹು ಮುಖ್ಯವಾದದ್ದು. ಅದಕ್ಕಾಗಿ ಹೊಸ ಶಿಕ್ಷಣ ನೀತಿ ರೂಪಿಸಿದ್ದೇವೆ
* ಮಹಿಳೆಯರು ಅವಕಾಶ ಸಿಕ್ಕಾಗಲೆಲ್ಲ ಭಾರತವನ್ನು ಗಟ್ಟಿಗೊಳಿಸಿದ್ದಾರೆ. ಹೆಮ್ಮೆಗೊಳ್ಳುವಂತೆ ಮಾಡಿದ್ದಾರೆ
* ಸ್ತ್ರೀಯರ ವಿವಾಹದ ಕನಿಷ್ಠ ವಯೋಮಿತಿಯ ಪುನರ್ ಪರಿಶೀಲನೆಗೆ ಸಮಿತಿ ರಚಿಸಿದ್ದೇವೆ. ಸಮಿತಿ ವರದಿ ಸಲ್ಲಿಸಿದ ಬಳಿಕ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ
* ಕೊರೊನಾಗೆ ಲಸಿಕೆ ಅಭಿವೃದ್ಧಿಪಡಿಸಲು ವಿಜ್ಞಾನಿಗಳು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದಲ್ಲಿ ಮೂರು ಲಸಿಕೆಗಳು ಪ್ರಾಯೋಗಿಕ ಹಂತದಲ್ಲಿವೆ. ವಿಜ್ಞಾನಿಗಳು ಸಮ್ಮತಿ ಸೂಚಿಸಿದ ಬೆನ್ನಲ್ಲೇ ಅಪಾರ ಪ್ರಮಾಣದ ಉತ್ಪಾದನೆ ಆರಂಭವಾಗಲಿದೆ
* ನಮ್ಮೊಂದಿಗೆ ಗಡಿ ಹಂಚಿಕೊಂಡಿರುವವರು ಮಾತ್ರ ನೆರೆಯವರಲ್ಲ. ಸಹೃದಯಿ ಬಾಂಧವ್ಯ ಹೊಂದಿಕೊಂಡಿರುವವರೂ ನೆರೆಯವರೇ. ಕಳೆದ ಕೆಲವು ಸಮಯಗಳಿಂದ ಭಾರತವು ಎಲ್ಲ ದೇಶಗಳೊಂದಿಗೆ ಬಾಂಧವ್ಯ ಹೆಚ್ಚಿಸಿಕೊಂಡಿದೆ
* ಭಯೋತ್ಪಾದನೆ, ಭೂಪ್ರದೇಶ ವಿಸ್ತರಣಾ ವಾದವನ್ನು ಭಾರತ ಸೋಲಿಸುತ್ತಿದೆ. ಎಲ್‌ಒಸಿಯಿಂದ ಎಲ್‌ಎಸಿ ವರೆಗೆ ನಮ್ಮ ದೇಶದ ಸಾರ್ವಭೌಮತ್ವದ ಮೇಲೆ ಕಣ್ಣಿಟ್ಟವರಿಗೆ ನಮ್ಮ ಯೋಧರು ಅವರದ್ದೇ ರೀತಿಯಲ್ಲಿ ತಿರುಗೇಟು ನೀಡಿದ್ದಾರೆ.