ನಿಟ್ಟೆ: ಭಾರತದ ಯುವಜನತೆ ದೇಶದ ಅತ್ಯಂತ ದೊಡ್ಡ ಸಂಪತ್ತು. ಭಾರತದ ಸಾಂಸ್ಕೃತಿಕ ಶ್ರೀಮಂತಿಕೆ ಹಾಗೂ ಸ್ನೇಹ ಮನೋಭಾವವನ್ನು ಜಗತ್ತಿಗೆ ಪಸರಿಸುವುದರ ಮೂಲಕ ದೇಶವನ್ನು ಜಾಗತಿಕ ಮಟ್ಟದಲ್ಲಿ ಇನ್ನೂ ಹೆಚ್ಚು ಪ್ರಸಿದ್ಧವಾಗಿಸಲು ಸಾಧ್ಯವಿದೆ” ಎಂದು ಡಾ.ಎನ್.ಎಸ್.ಎ.ಎಂ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಾಸುದೇವ ಭಟ್ ಅಭಿಪ್ರಾಯಪಟ್ಟರು.
ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ೭೪ನೇ ಸ್ವಾತಂತ್ರ್ಯೋತ್ಸವ ಸರಳ ಕಾರ್ಯಕ್ರಮದಲ್ಲಿ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು, ನಿಟ್ಟೆ ಕ್ಯಾಂಪಸ್ನ ರಿಜಿಸ್ಟ್ರಾರ್ ಪ್ರೊ.ಯೋಗೀಶ್ ಹೆಗ್ಡೆ, ಶಿಕ್ಷಕವೃಂದ, ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು. ಪ್ರಸ್ತುತ ಕೋವಿಡ್-೧೯ ಸಂದರ್ಭದಲ್ಲಿ ಮಿತ ಜನಸಂದಣಿಗೆ ಪೂರಕವಾಗಲು ಇದೇ ಪ್ರಥಮ ಬಾರಿಗೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮವನ್ನು ಗೂಗಲ್ ಮೀಟ್ ಮೂಲಕ ಲೈವ್ಸ್ಟ್ರೀಮಿಂಗ್ ನಡೆಸಲಾಯಿತು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್. ಚಿಪ್ಳೂಣ್ಕರ್ ಸ್ವಾಗತಿಸಿದರು. ನಿಟ್ಟೆ ವಿದ್ಯಾಸಂಸ್ಥೆಯ ಸೆಕ್ಯೂರಿಟಿ ವಿಭಾಗದ ಮುಖ್ಯಸ್ಥ ಸುಬೇದಾರ್ ಹಿರಿಯಣ್ಣ ಸುವರ್ಣ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.