ಕೃಷಿಯಲ್ಲೇ ಬದುಕು ಕಟ್ಟಿಕೊಂಡ ಕಾರ್ಕಳದ ಮುಂಡ್ಲಿಯ ಕೃಷಿಕ ಮಾಧವ ಗೌಡರ ಸಾಧನೆಯ ಕತೆ ಒಮ್ಮೆ ಕೇಳಿ!

ಕೃಷಿಯಲ್ಲಿ ವಿನೂತನವಾದ ಕೃಷಿ ವಿಧಾನವನ್ನು ಬಳಸಿಕೊಂಡು ಇಳುವರಿ ಪಡೆಯುವ ಮೂಲಕ ಭೇಷ್ ಎನಿಸಿಕೊಂಡಿದ್ದಾರೆ ಕಾರ್ಕಳ ತಾಲೂಕಿನ ಜಾರ್ಕಳ ಮುಂಡ್ಲಿಯ ಕೃಷಿಕ ಮಾಧವ ಗೌಡ. ಅಡಿಕೆ, ಬಾಳೆ, ಕರಿಮೆಣಸು, ಭತ್ತ, ತೆಂಗು, ಸುವರ್ಣ ಗೆಡ್ಡೆ  ಮೊದಲಾದ ಬೆಳೆಗಳನ್ನು ಬೆಳೆಸುತ್ತಲೇ ಕೃಷಿಯಲ್ಲೇ ಬದುಕು ಕಟ್ಟಿಕೊಂಡವರು  ಮಾಧವ ಗೌಡರು.

ಗೌಡರಿಗೆ ಸುಮರು ಎಂಟುವರೆ ಎಕರೆ ಜಾಗವಿದೆ. ಆ ಜಾಗವನ್ನು ಕ್ರಮವಾಗಿ ಬಳಸಿಕೊಂಡು ಕೃಷಿ ಮಾಡಿದ್ದಾರೆ. ಮಿಶ್ರ ಬೆಳೆಗೆ ಗೌಡರು ಹೆಚ್ಚಿನ ಪ್ರಾಧಾನ್ಯತೆಯನ್ನು ಕೊಡುತ್ತಿದ್ದು ಕ್ಯಾವೆಂಡಿಷ್ ಬಾಳೆ, ಕಾಳುಮೆಣಸು, ಸುವರ್ಣ ಗೆಡ್ಡೆ ಕೃಷಿಯನ್ನು ನೆಚ್ಚಿಕೊಂಡಿದ್ದಾರೆ.

ಇವರ ತೋಟದಲ್ಲಿ ವಾರ್ಷಿಕ 2000 ಅಡಿಕೆ ಮರಗಳು ಫಲ ನೀಡುತ್ತಿದ್ದು, ವಾರ್ಷಿಕ ನಲವತ್ತು ಕ್ವಿಂಟಾಲ್ ಅಡಿಕೆ ಫಸಲು ನೀಡುತ್ತಿದೆ. ಇನ್ಹನು ಬಾಳೆ ಕೃಷಿಯಲ್ಲಿ ಹದಿನೈದು ಕ್ವಿಂಟಾಲ್ ಕ್ಯಾವೆಂಡಿಷ್ ಬಾಳೆಯ ಇಳುವರಿ ಪಡೆಯುತ್ತಿದ್ದಾರೆ.ಇನ್ನು ಕರಿಮೆಣಸಲು ಕೃಷಿಯಲ್ಲಿಯೂ ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಕೃಷಿಗೆ ಹಟ್ಟಿ ಗೊಬ್ಬರ ಮತ್ತು ಕೋಳಿ ಗೊಬ್ಬರವನ್ನೇ ಬಳಸುತ್ತಿದ್ದಾರೆ ಮಾಧವ ಗೌಡರು

ಗೌಡರು ತಮ್ಮ ತೋಟದಲ್ಲಿ ಮೂರು ಕೆರೆಯನ್ನು ತೋಡಿದ ಪರಿಣಾಮ ಸರ್ವ ಋತು ನೀರಾವರಿ ಲಭಿಸುತ್ತಿದೆ. ಹಾಗಾಗಿ ಕೃಷಿ ಉತ್ತಮ ಉತ್ತಮ ಇಳುವರಿ ನೀಡುತ್ತಿದೆ, ಲಾಭದತ್ತ ಸಾಗುತ್ತಿದೆ.

ಲಾಭದಾಯಕ ಕೋಳಿ ಸಾಕಣೆ:

ಬರೀ ಅಡಿಕೆ, ತೆಂಗು, ಕಾಳುಮೆಣಸು ಕೃಷಿ ಮಾತ್ರವಲ್ಲ ಕೋಳಿ ಸಾಕಣಿಕೆಯಲ್ಲಿಯೂ ಗೌಡರು ಎತ್ತಿದ ಕೈ. ತಮ್ಮ ಖಾಲಿ ಜಾಗದಲ್ಲಿ ಶೆಡ್ ನಿರ್ಮಿಸಿ ಕೋಳಿ ಸಾಕಾಣಿಕೆ ಮಾಡುತ್ತಿದ್ದಾರೆ. ಸುಮಾರು 6,000 ಕೋಳಿಗಳನ್ನು ಸಾಕುತ್ತಿದ್ದು ಕೋಳಿ ಸಾಕಣಿಕೆ ಅತ್ಯಂತ ಲಾಭದಾಯವಾಗಿದೆ. ವಾರ್ಷಿಕ ಎಂಟರಿಂದ-ಒಂಬತ್ತು ಲಕ್ಷ ಲಾಭ ಪಡೆಯಬಹುದು ಎನ್ನುವುದು ಗೌಡರ ಮಾತು.

ಗೌಡರು ರೈತ ಸಂಪರ್ಕ ಕೇಂದ್ರದ ವಿಜ್ಞಾನಿಗಳ ಮೂಲಕ ಮಾಹಿತಿ ಪಡೆದು ಕೆಂಪು ಮಣ್ಣಿನ ಫಲವತ್ತತೆಯನ್ನು ಪರೀಕ್ಷಿಸಿಸುತ್ತಾರೆ. ಭತ್ತ, ಹೈನುಗಾರಿಕೆ ಕೋಳಿ ಸಾಕಾಣಿಕೆಯಲ್ಲಿ ತಮ್ಮ ಮನೆಯವರ ಜೊತೆ ತೊಡಗಿಸುವ ಮೂಲಕ ಉತ್ತಮ ಆದಾಯವನ್ನೂ ಗಳಿಸುತಿದ್ದಾರೆ. ಅದಕ್ಕಾಗಿ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ, ಬ್ರಹ್ಮಾವರ ಕೃಷಿ ವಿಜ್ಞಾನಕೇಂದ್ರ , ರೈತ ಸಂಪರ್ಕ ಕೇಂದ್ರಗಳ ಸಹಾಯವನ್ನು ಪಡೆಯುತ್ತಿದ್ದಾರೆ. ಮಂಗ, ನವಿಲು, ಕಾಡುಕೋಣಗಳಿಂದ ತೋಟಕ್ಕೆ ಹಾನಿಯಾಗದ ಹಾಗೆ ಬೇಲಿಯನ್ನೂ ನಿರ್ಮಿಸಿದ್ದಾರೆ.

ಸಾಧಕ ಕೃಷಿಕ:  ಮಾಧವ ಗೌಡರ ಕೃಷಿ ಸಾಧನೆಗೆ ಮೆಚ್ಚಿ ಜಿಲ್ಲಾ ಶ್ರೇಷ್ಠ ಕೃಷಿಕ ಪ್ರಶಸ್ತಿ ಅರಸಿ ಬಂದಿದೆ. ಇವರ ಸಾಧನೆ ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದು. ಇವರ ಕೃಷಿ ಕ್ಷೇತ್ರವನ್ನು ಕಣ್ತುಂಬಿಕೊಳ್ಳಲು ತೋಟಕ್ಕೆ ಭೇಟಿ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೃಷಿ ಮಾಡಬೇಕು ಎನ್ನುವ ಯುವ ಜನತೆಗೂ ಇವರ ಕೃಷಿ ಪ್ರೇರಣೆಯಾಗಿದೆ.

♦♦ರಾಮ್ ಅಜೆಕಾರು