ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪದವಿ ಮುಗಿದ ಬಳಿಕ ಯುವಕರು ಉದ್ಯೋಗ ಅರಸಿ ಮಹಾನಗರಿಯತ್ತ ಮುಖ ಮಾಡೋದು ಸಾಮಾನ್ಯ ,ಆದರೆ ಇಲ್ಲೊಬ್ಬ ಯುವಕ, ಹೈನುಗಾರಿಕೆಯಲ್ಲಿ ಏನಾದರೂ ಸಾಧನೆ ಮಾಡಬೇಕು ಎನ್ನುವ ಕನಸಿನಿಂದ ಹಸುಗಳ ಆರೈಕೆಯಲ್ಲಿಯೇ ತೊಡಗಿಕೊಂಡು ಬದುಕಿಗೊಂದು ದಾರಿ ಕಂಡುಕೊಂಡಿದ್ದಾರೆ.
ಈ ಯುವಕನ ಕತೆ ಕೇಳಿ:
ಹೈನುಗಾರಿಕೆಯೇ ನನ್ನ ಬದುಕಿಗೆ ದಾರಿಯಾಗಬಲ್ಲದು ಎನ್ನುವ ಸತ್ಯ ಅರಿವಾಗುತ್ತಿದ್ದಂತೆಯೇ ಈ ಯುವಕ ಹೈನುಗಾರಿಕೆ ಶುರುಮಾಡಿಯೇ ಬಿಡುತ್ತಾರೆ. ಹೈನುಗಾರಿಕೆ ಕನಸನ್ನು ನನಸು ಮಾಡಿದ ಯುವಕನೇ ಉಡುಪಿ ಜಿಲ್ಲೆಯ ಬಾರಾಳಿ ಗ್ರಾಮದ ಪ್ರತೀಶ್ ಶೆಟ್ಟಿ .
ಕೆಲಸದಲ್ಲಿ ನಿಷ್ಠೆ ಹಾಗೂ ಪರಿಶ್ರಮದಿಂದ ದುಡಿದರೆ ಯಾವುದೇ ಉದ್ಯೋಗದಿಂದ ಯಶಸ್ಸು ಸಾಧ್ಯ ಎನ್ನುವುದನ್ನು ಈಗಿನ ಯುವಕರಿಗೆ ತೋರಿಸಿಕೊಟ್ಟು ಇವರು ಮಾದರಿಯಾಗಿದ್ದಾರೆ.
ಉಡುಪಿಯಿಂದ ಸುಮಾರು 25 ಕಿಮಿ ದೂರದಲ್ಲಿರುವ ಬ್ರಹ್ಮಾವರ ತಾಲೂಕಿನ ಬಾರಾಳಿ ಗ್ರಾಮದ ಪ್ರತೀಶ್ ಶೆಟ್ಟಿ ಯುವ ರೈತ ಬಾರಾಳಿ ಪ್ರದೇಶದಲ್ಲಿ ಹೈನುಗಾರಿಕೆಯನ್ನು ಪ್ರಾರಂಭಿಸಿ ಸುತ್ತ-ಮುತ್ತಲಿನ ಗ್ರಾಮಗಳ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸಿದ್ದಾರೆ.ಹಸಿರು ಮೇವು ಅಭಿವೃದ್ಧಿ ಪಡಿಸುವ ಮೂಲಕ ಇವರಿಗೆ ಜಿಲ್ಲೆಯ ಯುವ ಕೃಷಿಕ ಎನ್ನುವ ಪುರಸ್ಕಾರವೂ ಸಂದಿವೆ.
ಹೈನುಗಾರಿಕೆಯ ಖುಷಿ:
ಮೊದಲು ಬರೀ ನಾಲ್ಕು ಹಸುವಿನೊಂದಿಗೆ ಹೈನುಗಾರಿಕೆ ಆರಂಭಿಸಿದ ಪ್ರತೀಶ್, ಕ್ರಮೇಣ ಹೈನುಗಾರಿಕೆಯ ವಿವಿಧ ಮಾಹಿತಿ ಹಾಗೂ ಜ್ಞಾನವನ್ನು ಸಂಪಾದಿಸಿದರು. ಇಂದು ಸುಮಾರು 18 ಹಸು ಹಾಗೂ 14 ಕರುಗಳನ್ನು ಸಾಕುತ್ತಿದ್ದಾರೆ.
ಇವರ ಬಳಿಯಲ್ಲಿರುವ ಎಚ್ಎಫ್ ತಳಿಯ ಆಕಳು ಕನಿಷ್ಠ 50 ಸಾವಿರ ರೂ.ಬೆಲೆ ಬಾಳುತ್ತವೆ. ಯುವ ರೈತ ಪ್ರತೀಶ್ ಅವರು 18 ಹಸುಗಳನ್ನು ಸಾಕಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚು ಆಕಳುಗಳನ್ನು ಖರೀದಿಸಿ ಹೆಚ್ಚಿನ ಪ್ರಮಾಣದಲ್ಲಿ ಹೈನುಗಾರಿಕೆಯನ್ನು ಬೆಳೆಸುವ ಗುರಿಯನ್ನು ಹೊಂದಿದ್ದಾರೆ.
“ಹಸುಗಳಿಗೆ ನಿತ್ಯವೂ 4 ಚೀಲ ಸುಗ್ರಾಸ್. ಒಂದು ಚೀಲ ಹಿಂಡಿ, ಸೇರಿದಂತೆ ಮುಂತಾದ ವಿವಿಧ ಆಹಾರ ನೀಡಲಾಗುತ್ತದೆ. ಔಷಧೋಪಚಾರ. ಪಶುಖಾಧ್ಯ ಸೇರಿದಂತೆ ನಿತ್ಯವೂ ಕನಿಷ್ಠ 3 ರಿಂದ 4 ಸಾವಿರ ರೂಗಳ ವರೆಗೆ ಖರ್ಚು ಬರುತ್ತದೆ, ಖರ್ಚು-ವೆಚ್ಚ ಕಳೆದು ಪ್ರತಿ ದಿನವೂ 4 ಸಾವಿರ ರೂಗಳ ಲಾಭಾಂಶ ದೊರೆಯುತ್ತದೆ ಎನ್ನುತ್ತಾರೆ ಯುವ ರೈತ ಪ್ರತೀಶ್.
ಹೈನುಗಾರಿಕೆಯ ಬಗ್ಗೆ ರುಡ್ಸೆಟ್ ಸೆಂಟರ್ ನಲ್ಲಿ ತರಬೇತಿ ಪಡೆದದ್ದು ಉಪಯೋಗಕ್ಕೆ ಬಂದಿದೆ.ತಂದೆ,ತಾಯಿ ಹಾಗೂ ಅಣ್ಣ ತಮ್ಮಂದಿರ ಸಹಕಾರವೂ ದೊರೆತಿರುವುದು ನನ್ನ ಕನಸಿಗೆ ಜೀವ ಬಂದಂತಾಗಿದೆ ಎನ್ನುತ್ತಾರೆ ಪ್ರತೀಶ್.
ಹೈನುಗಾರಿಕೆಗೆ ತಾಳ್ಮೆ ಮುಖ್ಯ:
ಹೈನುಗಾರಿಕೆ ಶುರುಮಾಡುವ ಆಸಕ್ತಿ ಇದ್ದರು.ಆ ಕುರಿತು ಒಂದಷ್ಟು ತರಬೇತಿ,ಮಾರ್ಗದರ್ಶನ ಪಡೆಯುವುದು ಸೂಕ್ತ, ಜೊತೆಗೆ ಹೈನುಗಾರಿಕೆ ಮಾಡಲು ತಾಳ್ಮೆಯೂ ಅತೀ ಮುಖ್ಯ. ಆರಂಭದಲ್ಲಿ ಆದಾಯ ಅಷ್ಟೊಂದು ಇಲ್ಲದಿದ್ದರೂ ಆ ಬಳಿಕ ಒಂದಷ್ಟು ಆದಾಯ ಮಾಡಿಕೊಳ್ಳಬಹುದು. ನೆಮ್ಮದಿಯ ಜೀವನ ಬೇಕು, ಒಂದಷ್ಟು ಹಣ ಬಂದರೂ ಸಾಕು ಎನ್ನುವವರಿಗೆ ಹೈನುಗಾರಿಕೆ ಸೂಕ್ತ ಎನ್ನುವುದು ಪ್ರತೀಶ್ ಹೇಳಿಕೆ.
ಯುವಕರಿಗೆ ಮಾದರಿ:ಪ್ರತೀಶ್ ಶೆಟ್ಟಿ ದಾರಿ
ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕು ನಡೆಸುತ್ತಿರುವ ಪ್ರತೀಶ್ ಅವರ ಬದುಕಿನ ದಾರಿ ಯುವಕರಿಗೆ ಮಾದರಿ, ತಾವೂ ಕೃಷಿ ಮಾಡಬೇಕು ಎನ್ನುವ ಆಸೆ ಇರುವವರಿಗೆ ಪ್ರತೀಶ್ ಅವರ ಹೈನುಗಾರಿಕೆಯ ಕ್ರಮವನ್ನು ಹತ್ತಿರದಿಂದ ನೋಡಿದರೂ ಸಾಕು, ಸ್ಪೂರ್ತಿ ಮೂಡೋದು ಖಂಡಿತ. ಮನಸ್ಸಿಟ್ಟು ಹೈನುಗಾರಿಕೆ ಶುರು ಮಾಡಿದರೆ ಬೇಕಾದಷ್ಟು ದುಡಿಯಲು ಏನೂ ಸಮಸ್ಯೆಯಿಲ್ಲ.ಅದಕ್ಕಿಂತಲೂ ಹೆಚ್ಚಾಗಿ ನೆಮ್ಮದಿಯ ಜೀವನ ನಮ್ಮದಾಗುವುದರಲ್ಲಿ ಸಂದೇಹ ಬೇಡ ಎನ್ನುವುದು ಪ್ರತೀಶ್ ಅವರ ಬದುಕುತ್ತಿರುವ ರೀತಿ ನೋಡಿ ಅರಿವಾಗುತ್ತದೆ.
ಪ್ರತೀಶ್ ಶೆಟ್ಟಿ ಅವರ ಸಂಪರ್ಕ:9663374624