ಬೆಂಗಳೂರು: ರಾಜ್ಯದಲ್ಲಿ ಡೆಡ್ಲಿ ಕೊರೊನಾ ತೀವ್ರಗತಿಯಲ್ಲಿ ವ್ಯಾಪಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಬೆಂಗಳೂರು ಮಾದರಿಯಲ್ಲಿಯೇ ಕೊರೊನಾ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
ಬೆಂಗಳೂರು ಸೇರಿದಂತೆ ಕೆಲವೊಂದು ಜಿಲ್ಲೆಗಳಲ್ಲಿ ಕೊರೊನಾ ಸೋಂಕಿನ ವೇಗ ಹೆಚ್ಚಾಗಿದ್ದು, ಇದಕ್ಕೆ ತಡೆಯೊಡ್ಡುವುದೇ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಬೆಂಗಳೂರಿನಲ್ಲಿ ಕೊರೊನಾ ವೇಗಕ್ಕೆ ಬ್ರೇಕ್ ಹಾಕುವ ಸಲುವಾಗಿ ಸರ್ಕಾರ ಮಂಗಳವಾರ (ಜುಲೈ 14) ರಾತ್ರಿ 8ಗಂಟೆಯಿಂದ ಜುಲೈ 23ರ ಬೆಳಿಗ್ಗೆ 5 ಗಂಟೆಯವರೆಗೆ ಒಂದು ವಾರ ಲಾಕ್ ಡೌನ್ ಘೋಷಣೆ ಮಾಡಿದೆ.
ಇದೀಗ ಕೊರೊನಾ ಹೆಚ್ಚಳವಾಗುತ್ತಿರುವ ಜಿಲ್ಲೆಗಳಿಂದಲೂ ಒಂದು ವಾರ ಕಾಲ ಲಾಕ್ ಡೌನ್ ಮಾಡುವಂತೆ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರು ನಾಳೆ ಜುಲೈ 13ರಂದು ಡಿಸಿಗಳ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕೊರೊನಾ ಹೆಚ್ಚುತ್ತಿರುವ ಜಿಲ್ಲೆಗಳಲ್ಲಿಯೂ ಲಾಕ್ ಡೌನ್ ಮಾಡುವ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿದ್ದು, ಲಾಕ್ ಡೌನ್ ಮಾಡುವ ವಿಚಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಬಿಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಯಾವ ಜಿಲ್ಲೆಗಳಲ್ಲಿ ಲಾಕ್ ಡೌನ್..?
ದಕ್ಷಿಣ ಕನ್ನಡ, ಬೀದರ್, ಬಳ್ಳಾರಿ, ಮೈಸೂರು, ಯಾದಗಿರಿ, ಧಾರವಾಡ, ಉಡುಪಿ, ಕಲಬುರ್ಗಿ ಜಿಲ್ಲೆಗಳಲ್ಲಿ ದಿನೇ ದಿನೇ ಕೊರೊನಾ ಹೆಚ್ಚಳವಾಗುತ್ತಿದೆ. ಈ ಜಿಲ್ಲೆಗಳಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆಯೂ ಹೆಚ್ಚುತ್ತಿದ್ದು, ಸಾವಿನ ಸಂಖ್ಯೆ ಏರುತ್ತಿದೆ. ಹಾಗಾಗಿ ಕೊರೊನಾ ಹರಡುವಿಕೆಯನ್ನು ನಿಯಂತ್ರಿಸುವ ಉದ್ದೇಶದಿಂದ ಬೆಂಗಳೂರು ಮಾದರಿಯಲ್ಲಿ ಈ ಜಿಲ್ಲೆಗಳಲ್ಲಿಯೂ ಒಂದು ವಾರ ಲಾಕ್ ಡೌನ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸಿಎಂ ಲಾಕ್ ಡೌನ್ ವಿಚಾರವನ್ನು ಆಯಾ ಜಿಲ್ಲೆಗಳ ಡಿಸಿಗಳ ನಿರ್ಧಾರಕ್ಕೆ ಬಿಡುವ ಸಾಧ್ಯತೆ ಹೆಚ್ಚಿದ್ದು, ಬೇರೆ ಜಿಲ್ಲೆಗಳಲ್ಲಿ ಲಾಕ್ ಡೌನ್ ಆಗಲಿದೆಯೇ ಎನ್ನುವುದು ನಾಳೆ ನಡೆಯುವ ಸಭೆಯಲ್ಲಿ ತೀರ್ಮಾನವಾಗಲಿದೆ.