ಕುಂದಾಪುರ: ಬಸ್ರೂರು ಮಾರ್ಗೋಳಿ ರಾಜ್ಯ ಹೆದ್ದಾರಿಯಲ್ಲಿ ಗುರುವಾರ ಸಂಜೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಸವಾರ ಮಹಿಳೆಯೊರ್ವರು ತೀವೃವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಸಂಭವಿಸಿದೆ.
ಮೃತರನ್ನು ಮಹಿಳೆಯನ್ನು ಕೋಡಿ ನಿವಾಸಿ ಮೈಮೂನ(50) ಎಂದು ಗುರುತಿಸಲಾಗಿದೆ. ಗುರುವಾರ ತಮ್ಮ ತವರು ಮನೆಯಾದ ಗುಲ್ವಾಡಿಯ ದರ್ಗಾಕ್ಕೆ ಪೂಜೆಗೆ ತೆರಳಿದ್ದ ಅವರು ಪತಿಯೊಂದಿಗೆ ಬಸ್ರೂರು ಮಾರ್ಗವಾಗಿ ಕೋಡಿಗೆ ಹಿಂತಿರುಗುತ್ತಿದ್ದ ವೇಳೆ ಮಾರ್ಗೋಳಿ ಬಳಿಯಲ್ಲಿ ಶಿವಮೊಗ್ಗ ಕಡೆಯಿಂದ ಸರಕು ತುಂಬಿಕೊಂಡು ಬರುತ್ತಿದ್ದ 10 ಚಕ್ರದ ಲಾರಿ ಸ್ಕೂಟರ್ಗೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ಸ್ಕೂಟರ್ನಿಂದ ರಸ್ತೆಗೆ ಎಸೆಯಲ್ಪಟ್ಟ ಮೈಮೂನ ಅವರ ಮೇಲೆ ಹರಿದ ಲಾರಿ ಚಕ್ರಗಳು ಅವರ ದೇಹವನ್ನು ಛಿದ್ರಗೊಳಿಸಿದೆ. ಗಂಭೀರವಾಗಿ ಗಾಯಗೊಂಡ ಅವರು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಅವರ ಪತಿ ಹಾಜಿ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಅಪಘಾತದಿಂದಾಗಿ ಕೆಲ ಹೊತ್ತು ಹೆದ್ದಾರಿಯ ವಾಹನ ಸಂಚಾರಕ್ಕೆ ತೊಡಕುಂಟಾಗಿತ್ತು. ಸ್ಥಳಕ್ಕೆ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಬಿ.ಪಿ.ದಿನೇಶ್ ಕುಮಾರ್, ಸರ್ಕಲ್ ಇನ್ಸ್ಪೆಕ್ಟರ್ ಮಂಜಪ್ಪ, ಕುಂದಾಪುರ ಠಾಣಾಧಿಕಾರಿ ಹರೀಶ್ ಹಾಗೂ ಕಂಡ್ಲೂರು ಠಾಣಾಧಿಕಾರಿ ಶ್ರೀಧರ ನಾಯ್ಕ್ ಆಗಮಿಸಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಬಗ್ಗೆ ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.