ಉಡುಪಿ: ಜಿಲ್ಲೆಯಲ್ಲಿ ಇಂದು ಆರು ಮಂದಿ ಕೊರೊನಾ ವಾರಿಯರ್ಸ್ ಸಹಿತ 40 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.
ಇಂದು ವಿಡಿಯೋ ಹೇಳಿಕೆ ಮೂಲಕ ಮಾಹಿತಿ ನೀಡಿದ ಅವರು, 40 ಸೋಂಕಿತರ ಪೈಕಿ 18 ಮಂದಿ ಪುರುಷರು, 15 ಮಹಿಳೆಯರು ಹಾಗೂ 6 ಮಂದಿ ಮಕ್ಕಳು ಇದ್ದಾರೆ. ಮುಂಬೈನಿಂದ ಬಂದ 15, ಬೆಂಗಳೂರಿನಿಂದ ಆಗಮಿಸಿದ ಇಬ್ಬರಿಗೆ ಹಾಗೂ ಬಾಗಲಕೋಟೆಯಿಂದ ಬಂದಿರುವ ಒಬ್ಬ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಉಳಿದಂತೆ ಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುವ ಆರು ಮಂದಿ ಕೊರೊನಾ ವಾರಿಯರ್ಸ್ಗಳಾದ ವೈದ್ಯರು ಹಾಗೂ ನರ್ಸ್ ಗಳಲ್ಲಿ ಕೊರೊನಾ ದೃಢಪಟ್ಟಿದೆ. ಇನ್ನು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದ 16 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಮಾಹಿತಿ ನೀಡಿದ್ದಾರೆ.
ಓರ್ವ ಎಸ್ಎಸ್ಎಲ್ ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈಕೆಯ ಮನೆಯ ಇಬ್ಬರಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಈಕೆಗೂ ಕೊರೊನಾ ಪರೀಕ್ಷೆ ನಡೆಸಲಾಗಿದ್ದು, ಇಂದು ಬಂದ ಅದರ ವರದಿ ಕೊರೊನಾ ಪಾಸಿಟಿವ್ ಇರುವುದು ದೃಢಪಟ್ಟಿದೆ. ಈ ವಿದ್ಯಾರ್ಥಿನಿ ಈಗಾಗಲೇ ಎರಡು ಪರೀಕ್ಷೆಯನ್ನು ಬರೆದಿದ್ದಾಳೆ. ಆದರೆ ನಾಳೆ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದಿಲ್ಲ. ಇನ್ನು ಉಳಿದಿರುವ ನಾಲ್ಕು ವಿಷಯಗಳನ್ನು ಮುಂದೆ ನಡೆಯುವ ಮರುಪರೀಕ್ಷೆಯಲ್ಲಿ ಬರೆಯಲು ಅವಕಾಶ ನೀಡಲಾಗುವುದು. ಹಾಗೆ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದ ಕೊಠಡಿಯನ್ನು ಸಂಪೂರ್ಣ ಸಾನಿಟೈಸರ್ ಮಾಡಲಾಗಿದ್ದು, ಆ ಕೊಠಡಿಯಲ್ಲಿ ಪರೀಕ್ಷೆ ನಡೆಸದಂತೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 1179 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1053 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನು 126 ಸಕ್ರಿಯ ಸೋಂಕಿತರು ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.