ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿನಿಯೊಬ್ಬಳ ಮನೆಯವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದು ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ.
ಪಡುಬಿದ್ರಿಯ ಪರೀಕ್ಷಾ ಕೇಂದ್ರವೊಂದರಲ್ಲಿ ಶನಿವಾರ ಈ ವಿದ್ಯಾರ್ಥಿನಿ ಪರೀಕ್ಷೆ ಬರೆದಿದ್ದಳು. ಅಂದೇ ಆಕೆಯ ಮನೆಯವರಿಗೆ ಸೋಂಕು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯ ಗಂಟಲಿನ ದ್ರವದ ಮಾದರಿಯನ್ನು ಕೊರೊನಾ ಪರೀಕ್ಷೆಗೆ ಕಳುಹಿಸಲಾಗಿದ್ದು, ಜೂನ್ 29ರೊಳಗೆ ಪರೀಕ್ಷಾ ವರದಿ ಬಾರದಿದ್ದರೆ ಆಕೆ, ಅಂದಿನ ಪರೀಕ್ಷೆ ಬರೆಯುವುದರಿಂದ ವಂಚಿತವಾಗುವ ಸಾಧ್ಯತೆ ಇದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿದ್ಯಾರ್ಥಿನಿಯ ವರದಿ ನೆಗೆಟಿವ್ ಬಂದರೂ ಆಕೆಯನ್ನು ಪ್ರತ್ಯೇಕ ಕೊಠಡಿಯಲ್ಲಿರಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ಹೇಳಲಾಗುತ್ತಿದೆ.