ಹೈದರಾಬಾದ್: ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಯೋಧರು ತೋರಿದ ಧೈರ್ಯ, ಸಾಹಸ, ತ್ಯಾಗವನ್ನು ಎಂದಿಗೂ ವ್ಯರ್ಥ ಆಗಲು ಬಿಡುವುದಿಲ್ಲ. ಈ ನಿಟ್ಟಿನಲ್ಲಿ ದೇಶದ ಜನತೆಗೆ ಭರವಸೆ ನೀಡುತ್ತೇನೆ ಎಂದು ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್ ಭದೌರಿಯಾ ಹೇಳಿದ್ದಾರೆ.
ಹೈದರಾಬಾದ್ ನ ವಾಯುಪಡೆ ಅಕಾಡೆಮಿಯಲ್ಲಿ ಶನಿವಾರ ನಡೆದ ಸಂಯೋಜಿತ ಪದವಿ ಪರೇಡ್ ನಲ್ಲಿ ಮಾತನಾಡಿದರು.
ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನೆ ಸರ್ವ ಸನ್ನದ್ಧವಾಗಿದೆ. ಶತ್ರು ದೇಶಗಳು ಗಡಿಯಲ್ಲಿ ನಡೆಸುವ ಚಟುವಟಿಕೆಗಳಿಗೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯೆ ನೀಡಲು ನಾವು ಸಮರ್ಥರಾಗಿದ್ದೇವೆ ಎಂದರು.
ಗಾಲ್ವಾನ್ ಕಣಿವೆಯಲ್ಲಿ ಅತ್ಯಂತ ಸವಾಲಿನ ಪರಿಸ್ಥಿತಿಯಲ್ಲಿ ಹೋರಾಡಿ ಪ್ರಾಣತ್ಯಾಗ ಮಾಡಿದ ನಮ್ಮ ವೀರಯೋಧರ ಶೌರ್ಯ, ದೇಶದ ಸಾರ್ವಭೌಮತ್ವವನ್ನು ಯಾವುದೇ ಹಂತದಲ್ಲೂ ರಕ್ಷಿಸುವ ಸಂಕಲ್ಪವನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಗಡಿಯಲ್ಲಿ ಶಾಂತಿ ಕಾಪಾಡಲು ಪ್ರಯತ್ನಗಳು ನಡೆಯುತ್ತಿವೆ. ಆದರೆ ನಮ್ಮ ಸಶಸ್ತ್ರಪಡೆಗಳು ಎಲ್ಲಾ ಸಮಯದಲ್ಲೂ ಸಿದ್ಧರಾಗಿರಬೇಕು ಹಾಗೂ ಜಾಗರೂಕರಾಗಿರಬೇಕು ಎಂಬುವುದನ್ನು ಸದ್ಯದ ಪರಿಸ್ಥಿತಿ ಸೂಚಿಸುತ್ತದೆ. ಗಾಲ್ವಾನ್ ಕಣಿವೆಯಲ್ಲಿ ನಡೆದ ಘಟನೆಯೇ ಇದಕ್ಕೆ ಉತ್ತಮ ನಿದರ್ಶನ ಎಂದು ಅವರು ಭಾರತೀಯ ಸೇನೆ ಸಲಹೆ ನೀಡಿದರು.