ಮಂಗಳೂರು: ಅಪೂರ್ಣಗೊಂಡಿರುವ ಎಲ್ಲಾ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸುವ ಕುರಿತು ಸ್ಮಾರ್ಟ್ ಸಿಟಿ ಅಧಿಕಾರಿಗಳು, ಕಾರ್ಯ ಅಭಿಯಂತರ, ಸಹಾಯಕ ಅಭಿಯಂತರರು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಸಭೆ ನಡೆಸಿದರು.
ಸಭೆಯ ಬಳಿಕ ಮಾತನಾಡಿದ ಶಾಸಕ ಕಾಮತ್, ಮಂಗಳೂರು ನಗರದ ಭವಂತಿ ಸ್ಟ್ರೀಟ್, ಎಸ್.ಎಲ್ ಮಥಾಯಿಸ್ ರಸ್ತೆ, ಅಶೋಕನಗರ ಹಾಸೆಟ್ಟಿ ಸರ್ಕಲ್, ಕದ್ರಿ ಕಂಬಳ, ಸ್ಟೇಟ್ ಬ್ಯಾಂಕ್ ನೆಲ್ಲಿಕಾಯಿ ರಸ್ತೆ, ಕ್ಲಾಕ್ ಟವರ್ ಜಂಕ್ಷನ್, ಬಿಜೈ ಕೆ.ಎಸ್.ಆರ್.ಟಿ.ಸಿ ರಸ್ತೆ, ಪಳ್ಳಿ ರಸ್ತೆ ಅಭಿವೃದ್ಧಿ, ಲಾಲ್ ಭಾಗ್- ಕೆಪಿಟಿ ರಸ್ತೆ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಪ್ರತ್ಯೇಕ ಸಮಿತಿ ನೇಮಕ ಮಾಡಲಾವುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಈಗಾಗಲೇ ರಸ್ತೆ ಅಗಲೀಕರಣಕ್ಕೆ ಗುರುತಿಸಿರುವ ರಸ್ತೆಗಳಿಗೆ ಬೇಕಾದ ಜಾಗಗಳನ್ನು ಜಾಗದ ಮಾಲಿಕರ ಮನವೊಲಿಸಿ ಪಡೆಯಬೇಕು. ಜಾಗ ನೀಡಿದ ದಾನಿಗಳಿಗೆ ಟಿ.ಡಿ.ಆರ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಹಾಗೂ ಸಾರ್ವಜನಿಕರ ಆಕ್ಷೇಪಣೆ ಇರುವ ಕಡೆಗಳಲ್ಲಿ ಈ ವಾರವೇ ಸಾರ್ವಜನಿಕರ ಹಾಗೂ ಜಾಗದ ಮಾಲಿಕರ ಮನವೊಲಿಸಲು ಸ್ವತಃ ನಾನು ಹಾಗೂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿ ಸಾರ್ವಜನಿಕರ ಮನವೊಲಿಸಲಾಗುವುದು ಎಂದಿದ್ದಾರೆ.
ಟಿ.ಡಿ.ಆರ್ ಸಂಬಂಧಪಟ್ಟಂತೆ ಟಿಡಿಆರ್ ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪ್ರತ್ಯೇಕ ಟಿಡಿಆರ್ ಸೆಲ್ ತೆರೆಯಲು ನಿರ್ಧರಿಸಲಾಗಿದೆ. ಅದರ ಪ್ರಕ್ರಿಯೆಗಳು ಶೀಘ್ರವೇ ಪ್ರಾರಂಭವಾಗುವುದು ಎಂದಿದ್ದಾರೆ.
ಸಭೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಹೆಗ್ಡೆ, ಸ್ಮಾರ್ಟ್ ಸಿಟಿ ಅಧಿಕಾರಿ ಮಹಮ್ಮದ್ ನಜೀರ್, ಮನಪಾ ಸ್ಥಾಯಿ ಸಮಿತಿ ಅದ್ಯಕ್ಷ ಪ್ರೇಮಾನಂದ ಶೆಟ್ಟಿ, ನಗರ ಯೋಜನಾಧಿಕಾರಿ ಬಾಲಕೃಷ್ಣ ಗೌಡ, ಧರ್ಮರಾಜ್, ಸಾರ್ವಜನಿಕ ಹಿತರಕ್ಷಣಾ ವೇದಿಕೆಯ ಹನುಮಂತ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಸ್ಮಾರ್ಟ್ ಸಿಟಿ ಅಧಿಕಾರಿಗಳು, ನಗರ ಯೋಜನಾಧಿಕಾರಿಗಳು ಉಪಸ್ಥಿತರಿದ್ದರು.