ಕುಂದಾಪುರ: ಕೊರೋನಾ ಜಾಗತಿಕ ಮಹಾಮಾರಿಯಾಗಿ ಪರಿಣಮಿಸಿರುವ ಈ ಕಾಲಘಟ್ಟದಲ್ಲಿ ಕೊರೋನಾ ವಿರುದ್ಧ ಜಾಗೃತಿ ಮೂಡಿಸುವ ಕೆಲಸಗಳು ಮನೆಮನೆಯಲ್ಲಿಯೂ ಆಗಬೇಕಿದೆ. ಆ ಹಿನ್ನೆಲೆಯಲ್ಲಿ ಬೈಂದೂರು ತಾಲೂಕು ಸೇನಾಪುರ ಗ್ರಾಮದ ಒಳಬೈಲು ಎಂಬಲ್ಲಿ ಜೂ.14ರಂದು ನಡೆದ ಸರಳ ಮದುವೆಯ ಸಡಗರದ ನಡುವೆಯೂ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವ ‘ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ ಎನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಿ ನೆರೆದವರಲ್ಲಿ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.
ಸೇನಾಪುರ ಗ್ರಾಮ ಒಳಬೈಲು ಶ್ರೀಮತಿ ಶಾರದಾ ಮತ್ತು ಗೋಪಾಲ ಇವರ ಪುತ್ರ ರಾಜಗುರು ಪಡುಕೋಣೆ ಮತ್ತು ಅಂಕದಕಟ್ಟೆ ಮೂಡ್‍ಹಂಗಳೂರು ಶ್ರೀಮತಿ ಮತ್ತು ವಿನೋದ ಮತ್ತು ದಿ|ಉದಯ ಕುಮಾರ ಅವರ ಪುತ್ರಿ ಸಹನಾರಾಣಿ ಅವರ ವಿವಾಹದ ವೇದಿಕೆಯಲ್ಲಿ ಡಾ|ಹೇಮಂತ್ ಕುಮಾರ್ ಸಾಸ್ತಾನ ಬರೆದಿರುವ ‘ಕೊರೋನಾ ವಿರುದ್ಧ ಜಯಿಸಲು 20 ಸೂತ್ರಗಳು’ ಎನ್ನುವ ಕೈಪಿಡಿಯನ್ನು ಬಿಡುಗಡೆಗೊಳಿಸಿ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ವಿತರಿಸಿ ಜಾಗೃತಿ ಮೂಡಿಸಲಾಯಿತು.
ಇದೇ ಸಂದರ್ಭದಲ್ಲಿ ನಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಪೆಡಲ್ ಸ್ಯಾನಿಟೈಸರ್ ಮೆಷಿನ್‍ನನ್ನು ಕೊಡುಗೆಯಾಗಿ ನೀಡಲಾಯಿತು. ನಾಡ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ| ಚಿಕ್ಮರಿ ಕೊಡುಗೆಯನ್ನು ಸ್ವೀಕರಿಸಿದರು. ಕುಂದಾಪುರದ ಇಎಸ್‍ಐ ಆಸ್ಪತ್ರೆಗೂ ಪೆಡಲ್ ಸ್ಯಾನಿಟೈಸರ್ ಮೆಷಿನ್‍ನನ್ನು ಕೊಡುಗೆಯಾಗಿ ನೀಡಲಾಯಿತು. ಈ ಸಂದರ್ಭದಲ್ಲಿ ಗೋಪಾಲಕೃಷ್ಣ ವಿವಿಧೋದ್ದೇಶ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಮೇಶ ಗಾಣಿಗ ಕೊಲ್ಲೂರು, ಪಡುಕೋಣೆ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ, ಕರ್ಣಾಟಕ ಬ್ಯಾಂಕಿನ ನಿವೃತ್ತ ಮೆನೇಜರ್ ಫಿಲಿಪ್ ಡಿಸಿಲ್ವ, ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಉಪಸ್ಥಿತರಿದ್ದರು.
ಸರಳವಾಗಿ ನಡೆದ ಈ ವಿವಾಹ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಥರ್ಮಲ್ ಸ್ಕ್ಯಾನಿಂಗ್‍ನ ವ್ಯವಸ್ಥೆಯೂ ಇತ್ತು.