ಕುಂದಾಪುರ: ನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಿ ಮನೆಗೆ ಬರುವಂತೆ ಮತ್ತು ಶಬರಿಮಲೆ ಸಂಪ್ರದಾಯ ಉಳಿವಿಗಾಗಿ ಗಂಗೊಳ್ಳಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಊರಿನ ಗ್ರಾಮಸ್ಥರು ಹಾಗೂ ಹಿಂದು ಸಂಘಟನೆಗಳ ಕಾರ್ಯಕರ್ತರು ಗಂಗೊಳ್ಳಿ ಪುರಾಣ ಪ್ರಸಿದ್ಧ ಶ್ರೀ ವೀರೇಶ್ವರ ದೇವಸ್ಥಾನದಲ್ಲಿ ಸೋಮವಾರ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಅಯ್ಯಪ್ಪ ಜ್ಯೋತಿ ಬೆಳಗಿದರು.
ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ ಗ್ರಾಮಸ್ಥರು ಹಾಗೂ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಮೀನುಗಾರಿಕೆಗೆ ತೆರಳಿದ ಮೀನುಗಾರರು ಸುರಕ್ಷಿತವಾಗಿ ಬೋಟು ಸಮೇತ ಮರಳಿ ಮನೆಗೆ ಬರಬೇಕು. ಮೀನುಗಾರರು ಯಾವುದೇ ಅಪಾಯಕ್ಕೆ ಸಿಲುಕಿದರೂ ಅವರಿಗೆ ಶ್ರೀದೇವರು ರಕ್ಷಣೆ ನೀಡಿ ಅವರನ್ನು ಕಾಪಾಡಬೇಕು ಎಂದು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ಶ್ರೀ ವೀರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರದಲ್ಲಿ ಆದ ಅನಾಹುತಗಳಿಗೆ ಕಾರಣರಾದವರಿಗೆ ದೇವರು ತಕ್ಕ ಶಿಕ್ಷೆ ನೀಡಿ ಇಂತಹ ಘಟನೆಗಳು ಪುನ: ನಡೆಯದಂತೆ ದೇವರು ರಕ್ಷಣೆ ಒದಗಿಸಿ ಕ್ಷೇತ್ರದ ಪಾವಿತ್ರ್ಯತೆ ಉಳಿಸಲು ಅಯ್ಯಪ್ಪ ಸ್ವಾಮಿ ಭಕ್ತರಿಗೆ ರಕ್ಷೆ ನೀಡಬೇಕು ಎಂದು ಪ್ರಾರ್ಥಿಸಿ ದೇವಳದ ಒಳ ಪ್ರಾಂಗಣದಲ್ಲಿ ಅಯ್ಯಪ್ಪ ಜ್ಯೋತಿ ಬೆಳಗಿದರು.
ತಾಲೂಕು ಪಂಚಾಯತ್ ಸದಸ್ಯ ಸುರೇಂದ್ರ ಖಾರ್ವಿ, ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ವಾಸುದೇವ ದೇವಾಡಿಗ, ರತ್ನಾಕರ ಗಾಣಿಗ, ನವೀನ ದೊಡ್ಡಹಿತ್ಲು, ರಾಘವೇಂದ್ರ ಗಾಣಿಗ, ಮೋಹನ ನಾಯ್ಕ್ ಗುಜ್ಜಾಡಿ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರು, ಹಿಂದು ಪರ ಸಂಘಟನೆಗಳ ಕಾರ್ಯಕರ್ತರು, ಗ್ರಾಮಸ್ಥರು ಉಪಸ್ಥಿತರಿದ್ದರು.