ಉಡುಪಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೂರದ ಊರುಗಳಿಗೆ ಸದ್ಯಕ್ಕೆ ಹವಾನಿಯಂತ್ರಿತ (ಎಸಿ) ಕೆಎಸ್ ಆರ್ ಟಿಸಿ ಹಾಗೂ ಖಾಸಗಿ ಬಸ್ ಗಳ ಸಂಚಾರ ಆರಂಭವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.
ಪ್ರತಿದಿನ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಿಂದ ಅಂತರ್ ಜಿಲ್ಲೆ ಮತ್ತು ರಾಜ್ಯಗಳಿಗೆ ಸುಮಾರು 50 ಕ್ಕಿಂತಲೂ ಹೆಚ್ಚಿನ ಎಸಿ ಬಸ್ ಗಳು ಓಡಾಡುತ್ತಿದ್ದವು. ಆದರೆ ಸದ್ಯ ಕೊರೊನಾ ಭೀತಿಯಿಂದ ಅವುಗಳನ್ನು ಸ್ಥಗಿತ ಮಾಡಲಾಗಿದೆ. ಬೆಂಗಳೂರು ನಗರದಲ್ಲಿ ಎಸಿ ಬಸ್ ಸಂಚಾರಕ್ಕೆ ಅವಕಾಶ ನೀಡಿದ್ದರೂ ಮಂಗಳೂರು ವಿಭಾಗಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ ಎಂದು ವಿಭಾಗೀಯ ಸಂಚಾರ ಅಧಿಕಾರಿ ತಿಳಿಸಿದ್ದಾರೆ.
ನಾನ್ ಎಸಿ ಬಸ್ ಸಂಚಾರ ಆರಂಭ:
ಮಂಗಳೂರು, ಪುತ್ತೂರು ವಿಭಾಗಗಳಿಂದ ಈಗಾಗಲೇ ನಾನ್ ಎಸಿ ಸ್ಪಿಪರ್ ಬಸ್ ಗಳ ಓಡಾಟ ಆರಂಭಗೊಂಡಿದೆ. ಹಾಗೆ ಧರ್ಮಸ್ಥಳ, ಸುಳ್ಯ ಹಾಗೂ ಮಡಿಕೇರಿ ಡಿಪೋಗಳಿಂದ ಒಂದೊಂದು ಬಸ್ ಸಂಚರಿಸುತ್ತಿದೆ.
ರಾತ್ರಿ 11 ಗಂಟೆಯವರೆಗೆ ಬಸ್ ಸೇವೆ:
ಮಂಗಳೂರು ಕೆಎಸ್ ಆರ್ ಟಿಸಿ ವಿಭಾಗಗಳಾದ ಉಡುಪಿ, ಕುಂದಾಪುರ ಹಾಗೂ ಮಂಗಳೂರು ಡಿಪೋಗಳಿಂದ ಇಂದಿನಿಂದ ಪ್ರತಿ ದಿನ ರಾತ್ರಿ 11 ಗಂಟೆಯವರೆಗೆ ದೂರದ ಊರುಗಳಿಗೆ ಬಸ್ ಸಂಚಾರ ಆರಂಭಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಕೊರೊನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಗೆ ಬಸ್ ಸಂಚಾರವನ್ನು ಸೀಮಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.