ಉಡುಪಿ: ಕಾರ್ಕಳ ತಾಲ್ಲೂಕಿನ 9 ತಿಂಗಳ ಗರ್ಭಿಣಿ ಸೇರಿದಂತೆ ಇಂದು ಹೊಸದಾಗಿ ಜಿಲ್ಲೆಯ 18 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಮಾಹಿತಿ ನೀಡಿದರು. ಕಾರ್ಕಳದ ಗರ್ಭಿಣಿಗೆ ಯಾವುದೇ ಬಾಹ್ಯ ಸಂಪರ್ಕ ಇಲ್ಲದಿದ್ದರು ಸೋಂಕು ಬಂದಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಯಾರಿಂದ ಸೋಂಕು ಬಂದಿದೆ ಎನ್ನುವುದನ್ನು ಪತ್ತೆ ಮಾಡಲಾಗುತ್ತಿದ್ದು, ಗರ್ಭಿಣಿ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಹೇಳಿದ್ದಾರೆ.
18 ಜನ ಸೋಂಕಿತರ ಪೈಕಿ ಮುಂಬೈನಿಂದ ಬಂದಿರುವ 13 ಮಂದಿ ಹಾಗೂ ತೆಲಂಗಾಣದಿಂದ ಬಂದಿರುವ ಓರ್ವನಲ್ಲಿ ಸೋಂಕು ದೃಢಪಟ್ಟಿದೆ. ಉಳಿದಂತೆ ಜಿಲ್ಲೆಯ ಮೂವರು ಪೊಲೀಸ್ ಕಾನ್ ಸ್ಟೇಬಲ್ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಈ ಮೂವರು ಕಾರ್ಕಳ ಗ್ರಾಮಾಂತರ, ಅಜೆಕಾರು ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಕಾನ್ ಸ್ಟೇಬಲ್ ಗೆ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಮೂರು ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದ್ದು, ಠಾಣೆಗೆ ಸಂಪೂರ್ಣ ಸ್ಯಾನಿಟೈಸರ್ ಸಿಂಪಡಣೆ ಮಾಡಿ ಎರಡು ದಿನಗಳ ಬಳಿಕ ಠಾಣೆಗಳು ಮತ್ತೆ ಕಾರ್ಯಾರಂಭ ಮಾಡಲಿವೆ ಎಂದು ತಿಳಿಸಿದ್ದಾರೆ.