ಮಲ್ಪೆ ಸಮೀಪ ಮಲ್ತಿ ದ್ವೀಪ ದ ಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ಶಂಕರನಾರಾಯಣ ದೇವಸ್ಥಾನದ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಇಲ್ಲಿ ಯಾವುದೇ ಜನವಸತಿ ಇಲ್ಲ. ಇಲ್ಲಿರುವ ಪರಾಶಕ್ತಿ ದೇವತೆಗೆ ಮಕರಸಂಕ್ರಾಂತಿಯಂದು ಕೊಡವೂರು ದೇವಸ್ಥಾನದ ವತಿಯಿಂದ ಪೂಜೆ ಸಲ್ಲಿಸುವುದು ಕೆಲವು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ.
ಹಿಂದಿನಿಂದಲೂ ಈ ಶಕ್ತಿ ದೇವತೆ ಇದ್ದರೂ ಕಾಲಾಂತರದಲ್ಲಿ ಪೂಜಾಕ್ರಮ ನಿಂತು ಹೋಗಿತ್ತು. ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದ ಪ್ರಕಾರ ಹಲವಾರು ವರ್ಷಗಳಿಂದ ಕೊಡವೂರು ದೇವಸ್ಥಾನದಿಂದ ಪೂಜೆ ಸಲ್ಲಿಕೆಯಾಗುತ್ತಿದೆ.
ಪೂಜಾ ವಿಧಿವಿಧಾನಗಳನ್ನು ದೇವಳದ ತಂತ್ರಿಗಳಾದ ಹಯವದನ ತಂತ್ರಿ ನೆರವೇರಿಸಿದರು. ಈ ಸಂದರ್ಭದಲ್ಲಿ ನಾಪತ್ತೆಯಾದ ಏಳು ಜನ ಮೀನುಗಾgರು ಶೀಘ್ರ ಮರಳ ಬರುವಂತೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು. ತದನಂತರ ಸಮುದ್ರ ಪೂಜೆ ನೆರವೇರಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸದಸ್ಯರಾದ ಜನಾರ್ದನ ಕೊಡವೂರು, ರಾಜು ಶೇರಿಗಾರ್, ಸುಧಾ ಎನ್ ಶೆಟ್ಟಿ, ಬೇಬಿ ಮೆಂಡನ್, ಚಂದ್ರಕಾಂತ್, ಸೇವಾ ಸಮಿತಿಯ ಭಾಸ್ಕರ್ ಭಟ್, ಗೋವಿಂದ ಐತಾಳ್, ಶ್ಯಾಮ ಸುಂದರ್ ಭಟ್, ಮೀನುಗಾರ ಮುಖಂಡರಾದ ರವಿರಾಜ ಸುವರ್ಣ, ಹರೀಶ್ ಕೋಟ್ಯಾನ್, ಸತೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.