ಮಂಗಳೂರು: ಜಿಲ್ಲೆಯಲ್ಲಿ ಕಂಡು ಬಂದ ಕೋರೋನಾ ಪ್ರಕರಣಗಳ ಮೂಲ ಪತ್ತೆ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ತಜ್ಞ ವೈದ್ಯಕೀಯ ತಂಡದೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜಿಲ್ಲಾ ಉಸ್ತುವಾರಿ ಸಚಿವರು ಮಾತನಾಡಿ, ಜನರಲ್ಲಿ ಸಂಶಯ ನಿವಾರಣೆ ಆಗತ್ಯ ಇರುವುದರಿಂದ ಸೋಂಕು ಮೂಲ ಪತ್ತೆ ಅನಿವಾರ್ಯವಾಗಿದ್ದು, ಇದರ ಬಗ್ಗೆ ಮತ್ತಷ್ಟು ವಿವರಣೆ ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಆರೋಗ್ಯಾಧಿಕಾರಿಗಳು ಮಾತನಾಡಿ, ಬಂಟ್ವಾಳ, ಫಸ್ಟ್ ನ್ಯೂರೋ ಹಾಗೂ ಬೋಳೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 1000ಕ್ಕೂ ಅಧಿಕ ಮಂದಿಯ ಗಂಟಲ ದ್ರವ ಪರೀಕ್ಷೆ ಮಾಡಲಾಗಿದೆ. ಇದರಲ್ಲಿ 17 ಖಚಿತ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ 8 ಬಂಟ್ವಾಳ, 3 ಫಸ್ಟ್ ನ್ಯೂರೋ ಹಾಗೂ 6 ಬೋಳೂರು ಪ್ರದೇಶಕ್ಕೆ ಸಂಬಂಧಿಸಿದೆ ಎಂದರು.
ಫಸ್ಟ್ ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದಮೇಲೆ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕೇರಳ ರಾಜ್ಯದಿಂದಲೂ ಹಲವಾರು ಮಂದಿ ಒಳರೋಗಿ, ಹೊರರೋಗಿಯಾಗಿ ಚಿಕಿತ್ಸೆ ಪಡೆದು, ಬಿಡುಗಡೆಯಾಗಿ ತೆರಳಿದ್ದಾರೆ. ಇವರ ಗಂಟಲ ದ್ರವ ತಪಾಸಣೆ ಅಗತ್ಯವಾಗಿದ್ದು, ಕೇರಳ ಸರಕಾರದ ಜತೆ ಸಂಪರ್ಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳು ತಿಳಿಸಿದರು.
ಅದೇ ರೀತಿ ಚಿಕ್ಕಮಗಳೂರು ಹಾಗೂ ಮಡಿಕೇರಿ ಜಿಲ್ಲೆಗಳಿಂದಲೂ ಈ ಆಸ್ಪತ್ರೆ ಗೆ ಹಲವಾರು ರೋಗಿಗಳು ದಾಖಲಾಗಿದ್ದು, ಮಡಿಕೇರಿ ಜಿಲ್ಲೆಯ ರೋಗಿಗಳ ವರದಿ ನೆಗೆಟಿವ್ ಆಗಿರುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 4398 ಗಂಟಲ ಮಾದರಿಯನ್ನು ಪರೀಕ್ಷೆ ಪಡಿಸಲಾಗಿದ್ದು, ಈ ಪೈಕಿ 31 ಖಚಿತ ಪ್ರಕರಣಗಳಿವೆ. ಸೋಂಕು ಮೂಲ ಪತ್ತೆ ಸಂಬಂಧ ವರದಿ ಸಲ್ಲಿಸಲು ಕೇರಳದಿಂದ ಈ ಆಸ್ಪತ್ರೆಗೆ ಬಂದ ರೋಗಿಗಳ ತಪಾಸಣಾ ವರದಿ ಬಂದ ಬಳಿಕವಷ್ಟೇ ಸೂಕ್ತ ನಿರ್ಣಯಕ್ಕೆ ಬರಲು ಸಾಧ್ಯ. ಈ ಹಿನ್ನಲೆಯಲ್ಲಿ ವರದಿ ಮಂಡಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಹೇಳಿದರು.
ಸಭೆಯಲ್ಲಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್, ಜಿಲ್ಲಾಧಿಕಾರಿ ಸಿಂಧೂ ರೂಪೇಶ್, ಸಿಇಓ ಡಾ. ಸೆಲ್ವಮಣಿ, ತಜ್ಞ ವೈದ್ಯಕೀಯ ತಂಡದ ಸದಸ್ಯರಾದ ಡಾ. ಜಾನ್, ಡಾ. ಸುಚಿತ್ರಾ ಶೆಣೈ, ಡಾ. ಪ್ರಶಾಂತ್ ಮಾರ್ಲ, ಡಾ. ಸಂದೀಪ್ ರೈ, ಡಾ. ಅಣ್ಣಯ್ಯ ಕುಲಾಲ್ ಮತ್ತಿತರರು ಇದ್ದರು.