-ಶ್ರೀಕಾಂತ ಹೆಮ್ಮಾಡಿ, ಕುಂದಾಪುರ
ಕುಂದಾಪುರ: ವಿಶ್ವದಾದ್ಯಂತ ಮರಣಮೃದಂಗ ಬಾರಿಸಿದ ಮಹಾಮಾರಿ ಕೊರೋನಾ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸರ್ಕಾರ ಹೊರಡಿಸಿದ ಲಾಕ್‍ಡೌನ್ ಆದೇಶದಿಂದಾಗಿ ಇದೀಗ ಗ್ರಾಮೀಣ ಭಾಗದ ಕೃಷಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ.
ಕೃಷಿಕರು ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಕಷ್ಟಪಟ್ಟು ಬೆಳೆದ ಫಸಲುಗಳನ್ನು ಜಾನುವಾರುಗಳು ಗೊಬ್ಬರಗುಂಡಿಗಳಿಗೆ ಹಾಕಿ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಕೃಷಿ ಕ್ಷೇತ್ರಕ್ಕೆ ಲಾಕ್‍ಡೌನ್ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಕಲ್ಲಂಗಡಿ, ಅನಾನಸು ಮುಂತಾದ ಗ್ರಾಮೀಣ ಭಾಗದ ಬೆಳೆಗಾರರು ತಾವು ಬೆಳೆದ ಹಣ್ಣುಗಳನ್ನು ಮಾರಾಟ ಮಾಡಲು ಸಾಧ್ಯವಾಗದೆ ಅಪಾರ ನಷ್ಟ ಅನುಭವಿಸುತ್ತಿದ್ದ ಹೊತ್ತಲ್ಲೇ ಇದೀಗ ಬಾಳೆಕಾಯಿ ಕೃಷಿಕರಿಗೂ ಕೂಡ ಲಾಕ್‍ಡೌನ್ ಬರೆ ಎಳೆದಿದೆ.
ಇಲ್ಲಿನ ಕೆರಾಡಿಯ ಕುಳ್ಳಂಬಳ್ಳಿ ನಿವಾಸಿ, ಕೃಷಿಕ ಬಚ್ಚ ಪೂಜಾರಿ ತಮ್ಮ ಮೂರು ಎಕರೆ ವಿಸ್ತೀರ್ಣದ ತೋಟದಲ್ಲಿ ಸುಮಾರು 2000ದಷ್ಟು ಬಾಳೆ ಕೃಷಿ ನಡೆಸಿದ್ದರು. ತಾವು ಬೆಳೆದ ಬಾಳೆಕಾಯಿ ಕೊನೆಗಳನ್ನು ಕುಂದಾಪುರದ ಎಪಿಎಂಸಿ ಆವರಣದಲ್ಲಿ ಶನಿವಾರ ನಡೆಯುವ ಸಂತೆಗೆ ಶುಕ್ರವಾರವೇ ಮಾರಾಟ ಮಾಡಿ ಹಣ ಗಳಿಸುತ್ತಿದ್ದರು. ಆದರೆ ಲಾಕ್‍ಡೌನ್‍ನಿಂದಾಗಿ ಕಳೆದ ಮೂರು ವಾರಗಳಿಂದ ಕೃಷಿಕ ಬಚ್ಚ ಪೂಜಾರಿಯವರು ಸಂತೆಗೆ ಹೋಗದ ಹಿನ್ನೆಲೆಯಲ್ಲಿ ಅಪಾರ ನಷ್ಟ ಅನುಭವಿಸುವಂತಾಗಿದೆ.
ಮರದಲ್ಲೇ ಹಣ್ಣಾಗುತ್ತಿದೆ ಬಾಳೆಕಾಯಿ!:
ವಾರದ ಪ್ರತೀ ಶುಕ್ರವಾರವೂ ಬಾಳೆಕಾಯಿ ಕೊನೆಗಳ ಕೊಯ್ಲು ನಡೆಸಿ ಸಂತೆಯಲ್ಲಿ ಮಾರಾಟ ನಡೆಸುತ್ತಿದ್ದ ಕೃಷಿಕ ಬಚ್ಚ ಪೂಜಾರಿ ಕಳೆದ ಮೂರು ವಾರಗಳಿಂದ ಕೊನೆ ಕೊಯ್ಲು ನಡೆಸಿಲ್ಲ. ಬಾಳೆಕೊನೆ ಕೊಯ್ಲು ನಡೆಸದ ಪರಿಣಾಮ ಬಾಳೆಮರಗಳಲ್ಲೇ ಬಾಳೆಕಾಯಿಗಳು ಹಣ್ಣುಗಳಾಗುತ್ತಿದ್ದು, ಕಾಳಬೆಕ್ಕು, ಮಿಗ ಮುಂತಾದ ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿದೆ.
44 ವರ್ಷಗಳಿಂದಲೂ ಬಾಳೆಕಾಯಿ ವ್ಯಾಪಾರ:
64 ವರ್ಷ ಪ್ರಾಯದ ಕೆರಾಡಿಯ ಬಚ್ಚ ಪೂಜಾರಿಯವರ ಬಾಳೆಕಾಯಿ ಮಾರಾಟ ಇಂದು ನಿನ್ನೆಯದಲ್ಲ. ಬರೋಬ್ಬರಿ 44 ವರ್ಷಗಳಿಂದಲೂ ಬಾಳೆಕಾಯಿ ಮಾರಾಟ ನಡೆಸುತ್ತಿದ್ದಾರೆ. ತಮ್ಮ ಇಪ್ಪತ್ತನೇ ವಯಸ್ಸಿನಲ್ಲಿ ಆರಂಭಿಸಿದ ಬಾಳೆಕಾಯಿ ವ್ಯಾಪಾರ ನಿರಂತರವಾಗಿ ಇಂದಿಗೂ ನಡೆಸಿಕೊಂಡು ಬಂದಿದ್ದಾರೆ. ಮೊದಮೊದಲು ಮಧ್ಯವರ್ತಿಯಾಗಿ ಬಾಳೆಕಾಯಿ ವ್ಯಾಪಾರ ನಡೆಸುತ್ತಿದ್ದ ಬಚ್ಚ ಪೂಜಾರಿ ಬಳಿಕ ತಾವೇ ಬಾಳೆ ಕೃಷಿಯನ್ನು ಆರಂಭಿಸಿದ್ದರು. ವಾರದ ಪ್ರತೀ ಸಂತೆಗೂ ನಾಲ್ಕು ಕ್ವಿಂಟಾಲ್‍ಗೂ ಅಧಿಕ ಬಾಳೆಕಾಯಿ ವ್ಯಾಪಾರ ನಡೆಸುತ್ತಿದ್ದ ಬಚ್ಚ ಪೂಜಾರಿಯವರು ಇದೀಗ ವ್ಯಾಪಾರವಿಲ್ಲದೇ ಕಂಗೆಟ್ಟಿದ್ದಾರೆ. ವರ್ಷಕ್ಕೆ ಲಕ್ಷಕ್ಕೂ ಅಧಿಕ ವರಮಾನ ತರುತ್ತಿದ್ದ ಬಾಳೆಕಾಯಿ ವ್ಯಾಪಾರ ಇದೀಗ ಸಂಪೂರ್ಣ ನೆಲಕಚ್ಚಿದೆ.
ಜಾನುವಾರುಗಳಿಗೆ, ಗೊಬ್ಬರಗುಂಡಿಗೆ ಬಾಳೆಹಣ್ಣು!:
ಹಣ್ಣಾದ ಬಾಳೆಕೊನೆಗಳು ಮರದಲ್ಲೇ ಇದ್ದರೆ ಕಾಡುಪ್ರಾಣಿಗಳಿಗೆ ಆಹಾರವಾಗುತ್ತಿರುವುದು ಮನಗಂಡ ಬಚ್ಚ ಪೂಜಾರಿಯವರು ಕೊನೆಗಳನ್ನು ಕಡಿದು ಮನೆಯ ದನಗಳಿಗೆ ಹಾಗೂ ಗೊಬ್ಬರ ಗುಂಡಿಗೆ ಹಾಕುತ್ತಿದ್ದಾರೆ. ಮೂರು ವಾರಗಳಿಂದ ಸರಿಸುಮಾರು 25 ಸಾವಿರಕ್ಕೂ ಅಧಿಕ ನಷ್ಟ ಅನುಭವಿಸಿದ್ದಾರೆ.
ಮೈಸೂರು ಬಾಳೆ ರಸಾಯನಕ್ಕೆ ಫೆವರೇಟ್:
ಮೈಸೂರು ಬಾಳೆಹಣ್ಣನ್ನು ಬೇಕರಿ ಹಾಗೂ ಜ್ಯೂಸ್ ಅಂಗಡಿಗಳಲ್ಲಿ ರಸಾಯನಕ್ಕೆ ಬಳಸುತ್ತಾರೆ. ಎಲ್ಲಾ ಅಂಗಡಿ ಮಾಲೀಕರು ಸಂತೆಯ ಮೊದಲ ದಿನವಾದ ಶುಕ್ರವಾರ ಸಂಜೆ ಕುಂದಾಪುರ ಸಂತೆಗೆ ಬಂದು ವಾರಕ್ಕಾಗುವಷ್ಟು ಬಾಳೆಕಾಯಿಗಳನ್ನು ಖರೀದಿಸುತ್ತಾರೆ. ರಸಾಯನಕ್ಕೆ ಬಹುಬೇಡಿಕೆಯ ಬಾಳೆಹಣ್ಣು ಇದಾಗಿದ್ದು, ಜ್ಯೂಸ್ ಅಂಗಡಿಗಳು ಬಂದ್ ಆದ ಪರಿಣಾಮ ಇದೀಗ ಬಾಳೆಕಾಯಿ ಕೃಷಿಕನ ಜೇಬಿಗೆ ಲಾಕ್‍ಡೌನ್ ಕತ್ತರಿ ಹಾಕಿದೆ.
-ಬಚ್ಚ ಪೂಜಾರಿ ಕೆರಾಡಿ, ಬಾಳೆ ಕೃಷಿಕ
ಲಾಕ್‍ಡೌನ್‍ನಿಂದಾಗಿ ವ್ಯಾಪಾರವಿಲ್ಲದೆ ಅಪಾರ ನಷ್ಟ ಅನುಭವಿಸುವಂತಾಗಿದೆ. ಮರದಲ್ಲೇ ಕಾಯಿಗಳು ಹಣ್ಣಾಗಿ ಕಾಡು ಪ್ರಾಣಿಗಳಿಗೆ ಆಹಾರವಾಗುತ್ತಿದೆ. ಕೆಲವೊಂದು ಕೊನೆಗಳ ಕೊಯ್ಲು ನಡೆಸಿ ಮನೆಯ ಜಾನುವಾರು, ಗೊಬ್ಬರ ಗುಂಡಿಗೆ ಹಾಕಿದ್ದೇನೆ. ನನ್ನ 44 ವರ್ಷದ ಬಾಳೆಕಾಯಿ ವ್ಯಾಪಾರದಲ್ಲೇ ಇದೇ ಮೊದಲ ಬಾರಿಗೆ ಇಷ್ಟೊಂದು ಅಧಿಕ ಪ್ರಮಾಣದಲ್ಲಿ ನಷ್ಟ ಅನುಭವಿಸುತ್ತಿದ್ದೇನೆ. ಸಂತೆಗೆ ಹೋದರೆ ಲಾಠಿ ಚಾರ್ಜ್ ಮಾಡುತ್ತಾರೆಂಬ ಭಯ ಆವರಿಸಿದೆ. ಮೈಸೂರು ಬಾಳೆಕಾಯಿ ಬೇಕರಿ, ಜ್ಯೂಸ್ ಅಂಗಡಿಗಳಲ್ಲಿ ರಸಾಯನ ಮಾಡಲು ಬಳಸುತ್ತಾರೆ. ಅಂಗಡಿಗಳೆಲ್ಲ ಬಂದ್ ಇದ್ದುದರಿಂದ ಬೆಳೆದ ಕಾಯಿಗಳೆಲ್ಲವೂ ಕೊಳೆತು ಹೋಗುತ್ತಿವೆ.
-ಸಂಜೀವ ನಾಯ್ಕ್, ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ
ರೈತರು ಬೆಳೆದ ಹಣ್ಣು, ತರಕಾರಿಗಳ ಸಾಗಾಟಕ್ಕೆ ಯಾವುದೇ ತೊಂದರೆ ಮಾಡದಂತೆ ಈಗಾಗಲೇ ಪೋಲಿಸರಿಗೂ ಸೂಚನೆ ನೀಡಲಾಗಿದೆ. ಅವರಿಗೆ ವಾಹನಕ್ಕೆ ಪಾಸ್ ವ್ಯವಸ್ಥೆ ಮಾಡಿಕೊಡಲಾಗುವುದು. ಇನ್ನು ಹೆಚ್ಚು ಬಾಳೆಕಾಯಿಗಳಿದ್ದರೆ ಹಾಪ್‍ಕಾಮ್ಸ್‍ಗೆ ಖರೀದಿ ಮಾಡಲಾಗುವುದು. ರೈತರು ಇಲಾಖೆಯನ್ನು ನೇರವಾಗಿ ಸಂಪರ್ಕಿಸಲಿ. ಅಗತ್ಯ ನೆರವು ನೀಡಲು ಪ್ರಯತ್ನಿಸಲಾಗುವುದು.