‘ಜನತಾ ಕರ್ಫ್ಯೂ’ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಹಮತ 

ಮಂಗಳೂರು: ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ‘ಜನತಾ ಕರ್ಫ್ಯೂ’ಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಪೂರ್ಣ ಸಹಮತ ದೊರೆತಿದೆ.
ಜನತೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ನೀಡಿದ್ದರಿಂದ ಮಂಗಳೂರು ಸಹಿತ ದಕ್ಷಿಣ ಕನ್ನಡ ಜಿಲ್ಲೆಯು ಸ್ತಬ್ಧಗೊಂಡಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಜನರು ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದಲೇ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ.
ವಾರದ ಹಿಂದೆಯೇ ಮಾಲ್‌ಗಳು, ಚಲನಚಿತ್ರ ಮಂದಿರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಸರಕಾರ ನಿರ್ಬಂಧ ಹೇರಿತ್ತು. ಇಂದು ಜನತಾ ಕರ್ಫ್ಯೂಗೆ ಬೆಂಬಲ ನೀಡುವಂತೆ ಪ್ರಧಾನಿ ಕರೆ ನೀಡಿದ ಮೇರೆಗೆ ಖಾಸಗಿ ಮತ್ತು ಸರಕಾರಿ ಬಸ್‌ಗಳು, ರೈಲು, ರಿಕ್ಷಾ, ಟ್ಯಾಕ್ಸಿ, ವಿಮಾನ ಯಾನ ಸಹಿತ ಎಲ್ಲಾ ರೀತಿಯ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಲಾಗಿತ್ತು.
ಅದರಂತೆ ಯಾವ ವಾಹನವೂ ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್‌ಗಳು ತೆರೆಯಲಿಲ್ಲ. ಸದಾ ಜನರ ಓಡಾಟದಿಂದ ಗಮನ ಸೆಳೆಯುತ್ತಿತ್ತದ್ದ ನಗರದ ಸೆಂಟ್ರಲ್ ಮಾರ್ಕೆಟ್, ಸ್ಟೇಟ್‌ಬ್ಯಾಂಕ್ ಪರಿಸರ, ರೈಲು ಮತ್ತು ರಿಕ್ಷಾ ಹಾಗೂ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿತ್ತು. ನಗರ ಮತ್ತು ಗ್ರಾಮಾಂತರ ಪ್ರದೇಶದ ಕೆಲವು ಕಡೆ ಬೆರೆಳೆಣಿಕೆಯ ವಾಹನಗಳು ಓಡಾಡುತ್ತಿತ್ತು. ಆ್ಯಂಬುಲೆನ್ಸ್ ಮತ್ತು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತುರ್ತು ಘಟಕಗಳು ಮಾತ್ರ ತೆರೆದಿತ್ತು.
ನಗರದಲ್ಲಿ ಒಂದೆರಡು ಪೆಟ್ರೋಲ್ ಬಂಕ್‌ಗಳು ಮತ್ತು ಮೆಡಿಕಲ್ ಅಂಗಡಿಗಳು ತೆರೆದಿತ್ತು. ಉಳಿದಂತೆ ಮಂಗಳೂರು ಸ್ತಬ್ಧಗೊಂಡಿತು. ಸಂಜೆ ಐದು ಗಂಟೆಗೆ ದಕ್ಷಿಣ ಕನ್ನಡ ಜಿಲ್ಲೆಯ ಜನ್ರು ಚಪ್ಪಾಳೆ ತಟ್ಟುವ ಮೂಲಕ ಸೇವಾನಿರತರಿಗೆ ಗೌರವ ಸಲ್ಲಿಸಿದ್ದಾರೆ. ವಿವಿಧ ಚರ್ಚ್ ಗಳಲ್ಲಿ ಸಹ ಗಂಟೆನಾದ ಮೂಲಕ ಗೌರವ ಸಲ್ಲಿಸಲಾಯಿತು.