ಉಡುಪಿ:ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ರಸ್ತೆಗೆ ಯು-ಟರ್ನ್ ನೀಡುವಂತೆ ಆಗ್ರಹ

ಉಡುಪಿ: ರಾಷ್ಟ್ರೀಯ ಹೆದ್ದಾರಿ 169 (ಎ)ರ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌–ಇಂದ್ರಾಳಿ ಮಧ್ಯೆ ಬರುವ ಲಕ್ಷ್ಮೀಂದ್ರ ನಗರ ಹಾಗೂ ವಿಭುದಪ್ರಿಯ ನಗರದಲ್ಲಿ ಯು ಟರ್ನ್‌ ನೀಡುವಂತೆ ಆಗ್ರಹಿಸಿ ಲಕ್ಷ್ಮೀಂದ್ರ ನಗರ ನಾಗರಿಕ ಸಮಿತಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು. ಹೆದ್ದಾರಿಯ ಮಣಿಪಾಲ ಸಿಂಡಿಕೇಟ್‌ ಸರ್ಕಲ್‌ನಿಂದ ಇಂದ್ರಾಳಿಯವರೆಗೆ ಮೂರು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಯು ಟರ್ನ್‌ ನೀಡಿಲ್ಲ. ಇದರಿಂದ ಅರ್ಧ ಕಿ.ಮೀ ದೂರದ ಊರುಗಳನ್ನು ತಲುಪಬೇಕಾದರೆ ಸುಮಾರು ಮೂರು ಕಿ.ಮೀ.ಕ್ಕಿಂತಲೂ ಅಧಿಕ ಹಾದಿಯನ್ನು ಕ್ರಮಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಲಕ್ಷ್ಮೀಂದ್ರನಗರ, ವಿಭುದಪ್ರಿಯನಗರ, ಹಯಗ್ರೀವ ನಗರ, ಸಗ್ರಿ, ಕುಂಡೇಲು, ಗುಳ್ಳೆ ಮೊದಲಾದ ಪ್ರದೇಶಗಳ ನಾಗರಿಕರು, ಶಾಲಾ–ಕಾಲೇಜು ವಿದ್ಯಾರ್ಥಿಗಳು ಹಾಗೂ ಆಟೊ ಚಾಲಕರು
ತುಂಬಾ ಕಷ್ಟ ಪಡುವಂತಾಗಿದೆ ಎಂದು ಸ್ಥಳೀಯ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿಯ ಅಧ್ಯಕ್ಷ ಕೆ.ಆರ್‌. ಕಾಮತ್‌ ಮಾತನಾಡಿ, ಅರ್ಧ ಕಿ.ಮೀ. ಹಾದಿಯನ್ನು ಕ್ರಮಿಸಲು ದುಪ್ಪಟ್ಟು ಹಣ ಖರ್ಚಾಗುತ್ತಿದ್ದು, ಸಮಯವೂ ವ್ಯರ್ಥವಾಗುತ್ತಿದೆ. ಇದರಿಂದ ಶಾಲಾ ಮಕ್ಕಳಿಗೆ, ಆಟೊ ಚಾಲಕರಿಗೆ ಹಾಗೂ ನಾಗರಿಕರಿಗೆ ಹೆಚ್ಚು ಹೊರೆ ಆಗುತ್ತಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ  ಮಾಡಿದ್ದೇವೆ. ಆದರೆ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ. ಹಿಂದೆ ಲಕ್ಷ್ಮೀಂದ್ರ ನಗರದಲ್ಲಿ ಎರಡು ಯು ಟರ್ನ್‌ ಇತ್ತು. ಈಗ ಒಂದು ಇಲ್ಲದೆ ತುಂಬಾ ಸಮಸ್ಯೆ ಆಗಿದೆ. ಆದ್ದರಿಂದ ಸಂಬಂಧಪಟ್ಟವರು ಕೂಡಲೇ ಎಚ್ಚೆತ್ತು ಯು ಟರ್ನ್‌ ನೀಡಬೇಕು ಎಂದು
ಒತ್ತಾಯಿಸಿದರು. ನಗರಸಭಾ ಸದಸ್ಯ ಮಂಜುನಾಥ್‌ ಮಣಿಪಾಲ, ಸಮಿತಿಯ ಕಾರ್ಯದರ್ಶಿ ಯೋಗೇಂದ್ರ ಕಾಮತ್‌,
ಸತೀಶ್‌ ರಾವ್‌, ಜಯ ಪೂಜಾರಿ, ಯತಿರಾಜ್‌, ಬಿ.ಸಿ. ಶೆಟ್ಟಿ ಹಾಜರಿದ್ದರು.