ನಿಟ್ಟೆ: ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ

ನಿಟ್ಟೆ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ (ಎನ್.ಎಸ್.ಎಸ್), ರೆಡ್‌ಕ್ರಾಸ್ ಸಂಸ್ಥೆ, ನಿಟ್ಟೆ, ಮೆಕ್ಯಾನಿಕಲ್ ವಿಭಾಗದ ಏಐಎಂಎಸ್ ಘಟಕ, ರೋಟರಿಕ್ಲಬ್ ನಿಟ್ಟೆ, ನಿಟ್ಟೆ ಗಜ್ರಿಯಾ ಆಸ್ಪತ್ರೆ, ಕೆ.ಎಸ್ ಹೆಗ್ಡೆ ಮೆಡಿಕಲ್ ಕಾಲೇಜು, ವೆನ್ಲಾಕ್ ಆಸ್ಪತ್ರೆ ಮತ್ತು ಉಡುಪಿ ಜಿಲ್ಲಾ ಆಸ್ಪತ್ರೆಯ ಸಂಯುಕ್ತ ಆಶ್ರಯದಲ್ಲಿ ಜ.೧೬ ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಿತು.

ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ ಎನ್.ಚಿಪ್ಳೂಣ್ಕರ್ ಜ್ಯೋತಿ ಬೆಳಗಿಸುವ ಮೂಲಕ ಸಾಂಕೇತಿಕವಾಗಿ ಶಿಬಿರಕ್ಕೆ ಚಾಲನೆ ನೀಡಿದರು.
ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಡಾ.ನಿರಂಜನ್ “ರಕ್ತದಾನ ಶಿಬಿರವು ಒಂದು ಉತ್ತಮ ಯೋಜನೆಯಾಗಿದ್ದು ಇದಕ್ಕೆ ವಿದ್ಯಾರ್ಥಿಗಳ ಬೆಂಬಲ ಅಗತ್ಯ. ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಈ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುವ ನಿಟ್ಟಿನಲ್ಲಿ ನಿಟ್ಟೆ ರೋಟರಿ ಕ್ಲಬ್, ನಿಟ್ಟೆ ಸಂಸ್ಥೆಯ ೨ ಆಸ್ಪತ್ರೆ, ವೆನ್ಲಾಕ್ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿಗಳ ಹಾಗೂ ಕಾಲೇಜಿನ ವಿದ್ಯಾರ್ಥಿಗಳ ಶ್ರಮ ಸ್ವಾಗತಾರ್ಹ” ಎಂದು ಶಿಬಿರಕ್ಕೆ ಶುಭಹಾರೈಸಿದರು.

ಉಪಪ್ರಾಂಶುಪಾಲ ಡಾ.ಶ್ರೀನಿವಾಸ ರಾವ್ ಬಿ ಆರ್, ರೆಡ್‌ಕ್ರಾಸ್ ಘಟಕದ ಮುಖ್ಯಸ್ಥ ಡಾ.ಎಸ್.ಕೆ ಮಹದೇವೇಗೌಡ, ನಿಟ್ಟೆ ರೋಟರಿ ಕ್ಲಬ್‌ನ ಅಧ್ಯಕ್ಷೆ ಡಾ.ವೀಣಾದೇವಿ ಶಾಸ್ತ್ರೀಮಠ್, ಏಐಎಂಎಸ್ ಸಂಯೋಜಕ ಡಾ.ಮಲ್ಲಿಕಪ್ಪ, ನಿಟ್ಟೆ ಗಜ್ರಿಯಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಶೋಕ್, ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ.ಚಂದ್ರಿಕಾ ರಾವ್, ವೆನ್ಲಾಕ್ ಆಸ್ಪತ್ರೆಯ ಡಾ.ಶರತ್ ಹಾಗೂ ಉಡುಪಿ ಜಿಲ್ಲಾ ಆಸ್ಪತ್ರೆಯ ಡಾ.ವೀಣಾಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಬಿರದ ಸಂಚಾಲಕ ಡಾ.ಜನಾರ್ದನ್ ನಾಯಕ್ ಅವರ ಮಾರ್ಗದರ್ಶನದಲ್ಲಿ ಈ ರಕ್ತದಾನ ಶಿಬಿರವನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಯಶಸ್ವೀಯಾಗಿ ಸಂಪನ್ನಗೊಳಿಸಿದರು. ಈ ಒಂದು ದಿನದ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳು, ಪ್ರಾಧ್ಯಾಪಕ ಹಾಗೂ ಭೋದಕೇತರ ವರ್ಗದವರ ರಕ್ತದಾನದೊಂದಿಗೆ ೪೩೧ ಯುನಿಟ್ ರಕ್ತವನ್ನು ಸಂಗ್ರಹಿಸಲಾಗಿದೆ ಎಂದು ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಂಶುಪಾಲರು ತಿಳಿಸಿದ್ದಾರೆ.