ಈಶಪ್ರಿಯ ತೀರ್ಥ ಶ್ರೀಪಾದರು ಪರ್ಯಾಯ ಪೀಠವೇರಲು ಕ್ಷಣಗಣನೆ:ಅದ್ದೂರಿ ಉಡುಪಿ ಪರ್ಯಾಯೋತ್ಸವಕ್ಕೆ ನೀವೂ ಬನ್ನಿ

ಉಡುಪಿ:ಅದ್ದೂರಿ ಪರ್ಯಾಯ ಮಹೋತ್ಸವಕ್ಕೆ ಉಡುಪಿ ಮೈತೆರೆದು ನಿಂತಿದೆ.ಎಲ್ಲೆಲ್ಲೂ ಶ್ರೀ ಕೃಷ್ಣನ ‌ನಾಡು ಉಡುಪಿಯಲ್ಲಿ ಪರ್ಯಾಯ ಮಹೋತ್ಸವವಂತೆ ಎನ್ನುವ ಸುದ್ದಿಯೇ! . ಅಷ್ಟಮಠಗಳ ಸಾಲಿನಲ್ಲಿ 16 ವರ್ಷಗಳಿಗೊಮ್ಮೆ ನಡೆಯುವ ಈ ಚಕ್ರದಲ್ಲಿ ಈ ಭಾರೀ ಪರ್ಯಾಯ ಪೀಠ  ಅಲಂಕರಿಸಲಿರುವುದು ಅದಮಾರು ಮಠದ ಯತಿಗಳು. ಅದಮಾರು ಮಠದ 32ನೇ ಯತಿಗಳಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಗಳ ಶಿಷ್ಯರಾದ ಶ್ರೀ ಈಶಪ್ರಿಯ ತೀರ್ಥರು. ಇವರು ಅದಮಾರು ಮಠದ 33ನೇ ಯತಿಗಳು.
29 ವರ್ಷದ ಈಶಪ್ರಿಯ ತೀರ್ಥ ಸ್ವಾಮೀಜಿ ಜನಿಸಿದ್ದು ಶಿರೂರಿನಲ್ಲಿ.‌ ಇವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಶಿರೂರಿನಲ್ಲಿ ಹಾಗೂ ಪ್ರೌಢಶಿಕ್ಷಣವನ್ನು ತೀರ್ಥಹಳ್ಳಿಯಲ್ಲಿ ಹಾಗೂ ಎಂಜಿನಿಯರಿಂಗ್ ಪದವಿಯನ್ನು ಶಿವಮೊಗ್ಗದಲ್ಲಿ ಪೂರ್ಣಗೊಳಿಸಿದ್ದಾರೆ. ಬಾಲ್ಯದಲ್ಲಿಯೇ ಆಧ್ಯಾತ್ಮದ ಕಡೆಗೆ ಆಕರ್ಷಿತರಾಗಿದ್ದ ಇವರು ಅನೇಕ ಸಂಸ್ಕೃತ ಗ್ರಂಥಗಳ ಅಧ್ಯಯನ ನಡೆಸಿದ್ದರು. 2014ರ ಜೂನ್ 19ರಂದು ಅದಮಾರು ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು ಹಾಗೂ ದ್ವಂದ್ವ ಮಠವಾದ ಶ್ರೀ ಪಲಿಮಾರು ಶ್ರೀ ವಿದ್ಯಾದೀಶ ತೀರ್ಥ ಶ್ರೀಗಳಿಂದ ಸನ್ಯಾಸ ದೀಕ್ಷೆ ಪಡೆದವರು. ತನ್ನ ಸನ್ಯಾಸತ್ವ ಸ್ವೀಕಾರದ ಬಳಿಕ 5 ವರ್ಷದ ಅವಧಿಯಲ್ಲಿ ದೇಶದಾದ್ಯಂತ ಸಂಚಾರ ನಡೆಸಿರುವ ಶ್ರೀಗಳು, ತನ್ನ ಪ್ರಾಪಂಚಿಕ ಜ್ಞಾನ, ವಿದ್ವತ್ತನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ.
ಶಾಸ್ತ್ರ ಪರಂರಪರೆ, ನಮ್ಮ ಸಂಸ್ಕೃತಿ, ಸಂಸ್ಕೃತ ಭಾಷೆಯ ಉಳಿವು ಜತೆಗೆ ನಮ್ಮ ಮುಂದಿನ ಪೀಳಿಗೆಗೂ ಈ ಭೂಮಿಯಲ್ಲಿ ನಾವು ಒಳ್ಳೆಯದನ್ನು ಬಿಟ್ಟು ಹೋಗಬೇಕು ಅನ್ನುವ ಅನೇಕ ಪ್ರಬುದ್ಧ ಯೋಚನೆಗಳು ಇವರದು.  ಹೆಚ್ಚು ಪರಿಸರಾಸಕ್ತರಾದ ಶ್ರೀಗಳು ತನ್ನ ಎರಡು ‌ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರದ ರಕ್ಷಣೆಗೆ, ನೀರಿನ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಈಗಾಗಲೇ ಘೋಷಿಸಿದ್ದಾರೆ. ಹೀಗೆ ಸಮಾಜದ ಒಳಿತಿಗಾಗಿ ತನ್ನ ಪರ್ಯಾಯ ಅವಧಿಯಲ್ಲಿ ಸಾಕಷ್ಟು ಯೋಜನೆಗಳನ್ನೂ ಹಾಕಿಕೊಂಡಿದ್ದಾರೆ. ನಾಳೆಯಿಂದ ಉಡುಪಿಗೆ ಉಡುಪಿಯೇ ಒಂದಾಗಲಿದೆ. ಭವ್ಯ ಪರ್ಯಾಯೋತ್ಸವಕ್ಕೆ ನೀವೂ ಸಾಕ್ಷಿಯಾಗಿ