ಗಣೇಶೋತ್ಸವದ ಜನಜಂಗುಳಿಯಲ್ಲಿ ವೃದ್ಧೆಯ ಚಿನ್ನದ ಸರ ಸುಲಿಗೆ: ಮೂವರು ಮಹಿಳೆಯರ ಬಂಧನ

ಉಡುಪಿ: ಗಣೇಶ ಚತುರ್ಥಿಯಂದು ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಜನಜಂಗುಳಿಯ ನಡುವೆ ವೃದ್ಧೆಯೊಬ್ಬರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸುಲಿಗೆ ಮಾಡಿದ್ದ ಪ್ರಕರಣವನ್ನು ಭೇದಿಸಿರುವ ಕುಂದಾಪುರ ಪೊಲೀಸರು, ತಮಿಳುನಾಡು ಮೂಲದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದು ₹2 ಲಕ್ಷ ಮೌಲ್ಯದ ಚಿನ್ನದ ಸರವನ್ನು ವಶಪಡಿಸಿಕೊಂಡಿದ್ದಾರೆ.

2026ರ ಸೆಪ್ಟೆಂಬರ್ 14ರಂದು ಗಣೇಶ ಚತುರ್ಥಿಯ ಪ್ರಯುಕ್ತ ಕುಂಭಾಶಿ ಶ್ರೀ ವಿನಾಯಕ ದೇವಸ್ಥಾನದಲ್ಲಿ ಭಕ್ತರ ದಟ್ಟಣೆ ಇತ್ತು. ಈ ವೇಳೆ ಪ್ರದಕ್ಷಿಣೆ ಬರುತ್ತಿದ್ದ ಬೈಂದೂರು ತಾಲೂಕಿನ ನಾಡ ಗುಡ್ಡೆಯಂಗಡಿ ನಿವಾಸಿ ಮುತ್ತು (75) ಎಂಬುವರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದುಷ್ಕರ್ಮಿಗಳು ಸುಲಿಗೆ ಮಾಡಿ ಪರಾರಿಯಾಗಿದ್ದರು.

ಈ ಕುರಿತು ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದ ತನಿಖೆ ವೇಳೆ ಚಿನ್ನದ ಸರ ಸುಲಿಗೆ ಮಾಡಿದ್ದ ತಮಿಳುನಾಡು ಮೂಲದ ವಲ್ಲಿಯಮ್ಮ, ದೇವಿ ಅಲಿಯಾಸ್ ತಿಲೋತ್ತಮ ಹಾಗೂ ಪೊನ್ನಿ ಎಂಬ ಮೂವರು ಮಹಿಳೆಯರನ್ನು ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಠಾಣೆ ಪೊಲೀಸರು ಬಂಧಿಸಿದ್ದರು.

ಬಳಿಕ ಕುಂದಾಪುರ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರ ನಿರ್ದೇಶನದಂತೆ ಕುಂದಾಪುರ ಪೊಲೀಸ್ ನಿರೀಕ್ಷಕರು ತನಿಖೆ ಮುಂದುವರಿಸಿದರು. ನ್ಯಾಯಾಲಯದ ಅನುಮತಿ ಪಡೆದು ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಜೈಲಿನಲ್ಲಿದ್ದ ಆರೋಪಿತರನ್ನು ವಶಕ್ಕೆ ಪಡೆದು ಕುಂದಾಪುರಕ್ಕೆ ಕರೆತಂದು ವಿಚಾರಣೆ ನಡೆಸಿದರು.

ಈ ವೇಳೆ ಆರೋಪಿತರು ಸುಲಿಗೆ ಮಾಡಿದ್ದ 15.340 ಗ್ರಾಂ ತೂಕದ, ಅಂದಾಜು ₹2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.