ಉಡುಪಿ: ಮಲ್ಪೆ ಪಡುಕರೆ ಸಮೀಪ ನ.28ರಂದು ‘ಸಿರೆನಾ ಲಕ್ಸುರಿ ಬೀಚ್ ರೆಸಾರ್ಟ್’ ಅದ್ದೂರಿ ಉದ್ಘಾಟನೆ

ಉಡುಪಿ: ಮಲ್ಪೆ ಪಡುಕರೆ ಶಾಂತಿನಗರದಲ್ಲಿ ಸುಮಾರು 9 ಎಕರೆ ವಿಸ್ತೀರ್ಣದಲ್ಲಿ ನಿರ್ಮಾಣಗೊಂಡಿರುವ ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್ ನ.28ರಂದು ಶುಭಾರಂಭಗೊಳ್ಳಲಿದೆ.

ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆ ಕೋಸ್ಟಲ್ವುಡ್ ರೆಸಾರ್ಟ್ಸ್ ಉಡುಪಿ ಸಂಸ್ಥೆಯ ಈ ರೆಸಾರ್ಟ್‌ನ ಉದ್ಘಾಟನಾ ಕಾರ್ಯಕ್ರಮ ಬೆಳಗ್ಗೆ 11.30ಕ್ಕೆ ನಡೆಯಲಿದೆ.

ಕಾರ್ಯಕ್ರಮದಲ್ಲಿ ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ. ಚಾರ್ಜ್, ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ ಮತ್ತು ಬಂದರು ಸಚಿವ ಕೆ.ಎಸ್. ಬಸವಂತಪ್ಪ, ವಿಧಾನಸಭಾ ಉಪಸಭಾಪತಿ ಮಂಕಾಳ ವೈದ್ಯ, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ, ಐವನ್ ಡಿಸೋಜ, ಮಾಜಿ ಶಾಸಕ ಕೆ. ರಘುಪತಿ ಭಟ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ವೈಭವಯುತ ರೆಸಾರ್ಟ್ ನಲ್ಲಿ ಏನೇನಿದೆ ವಿಶೇಷ?

ರೆಸಾರ್ಟ್‌ನಲ್ಲಿ ಸುಮಾರು 55 ಹವಾನಿಯಂತ್ರಿತ ಡೀಲಕ್ಸ್ ಕೊಠಡಿಗಳಿವೆ. ಕಡಲು ಮತ್ತು ಹಿನ್ನೀರಿನ ಸಂಗಮದ ಸುಂದರ ನೋಟವನ್ನು ಆಸ್ವಾದಿಸಲು ಇಲ್ಲಿ ಅವಕಾಶವಿದೆ. ಗ್ರಾಹಕರಿಗೆ ಕೈಗೆಟಕುವ ದರದಲ್ಲಿ ವಿವಿಧ ಸೌಲಭ್ಯಗಳನ್ನು ಒದಗಿಸಲಾಗಿದೆ.

ಫ್ಯಾಮಿಲಿ ರೆಸ್ಟೋರೆಂಟ್, ಮಲ್ಟಿಕುಸಿನ್ ಬಾರ್, ಸಸ್ಯಾಹಾರಿ ರೆಸ್ಟೋರೆಂಟ್ ಹಾಗೂ ಕಾಫಿ ಶಾಪ್ ವ್ಯವಸ್ಥೆಯಿದೆ. ಸ್ಪಾ, ಸ್ವಿಮ್ಮಿಂಗ್ ಪೂಲ್, ಜಿಮ್ ಮತ್ತು ಮಕ್ಕಳ ಆಟದ ಉದ್ಯಾನವನವೂ ಇವೆ. 400ಕ್ಕೂ ಅಧಿಕ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನಿಲುಗಡೆ ಮಾಡಬಹುದಾದ ವಿಶಾಲ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾರ್ಪೊರೇಟ್ ಸಭೆ ಮತ್ತು ಸಮಾರಂಭಗಳಿಗೆ ಬೋರ್ಡ್ ರೂಮ್, ಕಾನ್ಫರೆನ್ಸ್ ಹಾಲ್ ಹಾಗೂ ಸಸ್ಯಾಹಾರ ಮತ್ತು ಮಾಂಸಾಹಾರ ತಯಾರಿಕೆಗೆ ಪ್ರತ್ಯೇಕ ಅಡುಗೆ ಕೋಣೆಗಳಿವೆ.

400ಕ್ಕೂ ಅಧಿಕ ಮಂದಿ ಆಸೀನರಾಗಬಹುದಾದ ಔರೇಲಿಯಾ ಬ್ಯಾಂಕ್ವೆಟ್ ಹಾಲ್, ಪ್ರಸನ್ನ ಗಣಪತಿ ಮಂದಿರ ಹಾಗೂ ಮದುವೆ ಮತ್ತು ಇತರ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಸಿರೆನಾ ಗ್ರೀನ್ಸ್ ಓಪನ್ ಗಾರ್ಡನ್ ಕೂಡ ರೆಸಾರ್ಟ್‌ನಲ್ಲಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ನಟ ಹಾಗೂ ನಿರ್ದೇಶಕ ರೂಪೇಶ್ ಶೆಟ್ಟಿ, ‘ಪ್ರೇಮದ ಊರಲಿ’ ಚಿತ್ರದ ನಾಯಕ ಶ್ರೀರಾಮ್ ಮತ್ತು ನಾಯಕಿ ತಪಸ್ವಿನಿ ಪೂಣಚ್ಚ ಭಾಗವಹಿಸಲಿದ್ದಾರೆ ಎಂದು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಜಿ. ಶಂಕರ್ ತಿಳಿಸಿದ್ದಾರೆ.